ಮಲೆನಾಡಿಗೆ ಸಿಗದ ಸಚಿವ ಸ್ಥಾನ I minister post

ಡಿ.ಕೆ.ಶಿವಕುಮಾರ್ ಅವರ ಯಶಸ್ಸಿಗೆ ಪ್ರಾರ್ಥಿಸಿ ಒಕ್ಕಲಿಗರ ಒಕ್ಕೂಟದಿಂದ ಶಿವಮೊಗ್ಗ ಶರಾವತಿ ನಗರದ ಕಾಲಭೈರವೇಶ್ವರ ದೇವಾಲಯದಲ್ಲಿ 101 ಈಡುಗಾಯಿ ಒಡೆಯಲಾಯಿತು. ಗೋ.ರಮೇಶ್‌ಗೌಡ, ಶಾಂತಾ ಸುರೇಂದ್ರ ಇತರರಿದ್ದರು.
ಡಿ.ಕೆ.ಶಿವಕುಮಾರ್ ಅವರ ಯಶಸ್ಸಿಗೆ ಪ್ರಾರ್ಥಿಸಿ ಒಕ್ಕಲಿಗರ ಒಕ್ಕೂಟದಿಂದ ಶಿವಮೊಗ್ಗ ಶರಾವತಿ ನಗರದ ಕಾಲಭೈರವೇಶ್ವರ ದೇವಾಲಯದಲ್ಲಿ 101 ಈಡುಗಾಯಿ ಒಡೆಯಲಾಯಿತು. ಗೋ.ರಮೇಶ್‌ಗೌಡ, ಶಾಂತಾ ಸುರೇಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಹಂತದಲ್ಲಿ 13 ಪ್ರತಿನಿಧಿಗಳ ಪ್ರಮಾಣ ವಚನ
  • ಎರಡನೇ ಹಂತದಲ್ಲಿ ದೊರಕುವ ನಿರೀಕ್ಷೆ
  • ಸಿಎಂ ಆಗಿ ಡಿಕೆಶಿ ಅಧಿಕಾರ ಸ್ವೀಕಾರ
ಶಿವಮೊಗ್ಗ: ಮುಖ್ಯಮಂತ್ರಿ (chief minister) ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಬೇಕೆಂಬ ಜಿಲ್ಲೆಯ ಮೂವರು ಶಾಸಕರ ಆಸೆ ಮೊದಲ ಹಂತದಲ್ಲಿ ಈಡೇರಿಲ್ಲ. ಹೀಗಾಗಿ ಜಿಲ್ಲೆಗೆ ಸಚಿವ (minster) ಸಂಪುಟ (cabinet) ದಲ್ಲಿ ಪ್ರಾತಿನಿಧ್ಯ ಸಿಗಲು ಸಂಪುಟ ವಿಸ್ತರಣೆವರೆಗೆ ಕಾಯಬೇಕು. ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯಾಗಿದ್ದರೆ ಒಬ್ಬರಿಗಾದರೂ ಸಿಎಂ ಜತೆಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿದ್ದವು.
13 ಮಂದಿ ಮಾತ್ರ ಮೊದಲ ಸುತ್ತಿನಲ್ಲಿ ಸಂಪುಟ ಸೇರುವ ಅವಕಾಶ ಪಡೆದಿದ್ದರಿಂದ ಜಿಲ್ಲೆಯವರಿಗೆ ಅವಕಾಶ ಸಿಗದಂತಾಯಿತು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಸೊರಬ ಶಾಸಕ ಮಧು ಬಂಗಾರಪ್ಪ ಮೂವರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಮಧು ಡಿಕೆಶಿ ಸಂಪುಟಕ್ಕೂ ಸೇರ್ಪಡೆಯಾಗುವ ಕಾತರದಲ್ಲಿದ್ದರು. ಉಳಿದಿಬ್ಬರು ಮೊದಲ ಬಾರಿ ಸಚಿವ ಸ್ಥಾನಕ್ಕೇರುವ ನಿರೀಕ್ಷೆ ಹೊಂದಿದ್ದರು.
ಬೇಳೂರು ಹಾಗೂ ಮಧು ಒಂದೇ ಸಮುದಾಯ ಆಗಿರುವುದರಿಂದ ಇವರಿಬ್ಬರ ಪೈಕಿ ಒಬ್ಬರು ಮಂತ್ರಿ ಆಗಬಹುದೆಂಬ ಲೆಕ್ಕಾಚಾರ ಇತ್ತು. ಕಡೇ ಪಕ್ಷ ಮೂವರ ಪೈಕಿ ಹಿರಿತನ ಹೊಂದಿರುವ, ಮೂಲ ಕಾಂಗ್ರೆಸ್ಸಿಗ ಹಣೆಪಟ್ಟಿ ಇರುವ, ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಕೆ.ಸಂಗಮೇಶ್ವರ್‌ಗೆ ಮಂತ್ರಿಗಿರಿ ಒಲಿಯಬಹುದೆಂಬ ನಿರೀಕ್ಷೆಯಿತ್ತು. ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು.
ಈಗ ಸಚಿವರಾಗಿರುವವರು ಎಲ್ಲರೂ ಹಲವು ಬಾರಿ ಶಾಸಕರು, ಸಚಿವರಾಗಿ ಕೆಲಸ ಮಾಡಿದವರೇ ಆಗಿದ್ದಾರೆ. ಪ್ರಸ್ತುತ ಅಹಿಂದ, ಲಿಂಗಾಯತ, ಒಕ್ಕಲಿಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ. ಮುಂದಿನ ವಿಸ್ತರಣೆ ವೇಳೆ ಜಿಲ್ಲಾವಾರು ಅವಕಾಶ ನೀಡಬಹುದು ಎಂಬ ಲೆಕ್ಕಾಚಾರವಿದೆ.

ಆಸೆ ವ್ಯಕ್ತಪಡಿಸಿದ್ದ ಬಿಕೆಎಸ್

ಬಿ.ಕೆ.ಸಂಗಮೇಶ್ವರ್ ಮೂರು ವರ್ಷಗಳ ಹಿಂದೆ ಸರ್ಕಾರ ರಚನೆ ಸಂದರ್ಭದಲ್ಲೇ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿ, ಹಿರಿತನದೊಂದಿಗೆ ಮೂಲ ಕಾಂಗ್ರೆಸ್ಸಿಗ ಎಂಬ ಬಲ ಹೊಂದಿದ್ದ ಸಂಗಮೇಶ್ವರ್‌ಗೆ ಚುನಾವಣಾ ಪೂರ್ವದಲ್ಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ನಮ್ಮ ಸರ್ಕಾರ ಬಂದರೆ ಸಂಗಮೇಶ್ವರ್ ಮಂತ್ರಿಯಾಗುತ್ತಾರೆಂದು ಹೇಳಿದ್ದರು. ಭದ್ರಾವತಿ ಜನತೆಯಲ್ಲೂ ಹಲವು ನಿರೀಕ್ಷೆಗಳಿದ್ದವು. ಮೊದಲ ಬಾರಿ ನಮ್ಮ ಕ್ಷೇತ್ರದ ಶಾಸಕರೊಬ್ಬರು ಮಂತ್ರಿಯಾಗಲಿ ಎಂದು ಬಯಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಂತೂ ಸಂಗಮೇಶ್ವರ್‌ಗೆ ಅವಕಾಶ ಸಿಗಲಿಲ್ಲ. ಡಿಕೆಶಿ ಅವರ ಸರ್ಕಾರದಲ್ಲೂ ಈಗ ಅವಕಾಶ ಸಿಕ್ಕಿಲ್ಲ. ಮುಂದಿನ ಸಚಿವ ಸಂಪುಟ ವಿಸ್ತರಣೆವರೆಗೂ ಸಂಗಮೇಶ್ವರ್ ಕಾಯಬೇಕಿದೆ.
ಫಲ ನೀಡದ ದೆಹಲಿ ಯಾತ್ರೆ
ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವಗಿರಿ ಬಯಸಿ ದೆಹಲಿ ದಂಡಯಾತ್ರೆ ನಡೆಸಿದ್ದರು. ಡಿ.ಕೆ.ಶಿವಕುಮಾರ್ ಸಿಎಂ ಎಂದು ಘೋಷಣೆಯಾದ ಬಳಿಕ ಬೆಂಗಳೂರಿನಲ್ಲೇ ಇದ್ದು ಕಡೇ ಕ್ಷಣದವರೆಗೂ ಸಚಿವ ಸ್ಥಾನ ಪಡೆಯಲು ಪ್ರಯತ್ನಿಸಿದ್ದರು. ಆದರೆ ಪ್ರಯತ್ನ ಫಲ ನೀಡಿಲ್ಲ. ಮೊದಲ ಹಂತದಲ್ಲಿ ಈಡಿಗ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೇ ಇರುವುದರಿಂದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೇಳೂರು ನಿರೀಕ್ಷೆ ಮತ್ತೆ ಹೆಚ್ಚಾಗಬಹುದು.

ಮುಖಂಡರು-ಕಾರ್ಯಕರ್ತರ ಸಂಭ್ರಮ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಹಾಗೂ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ಶಿವಪ್ಪನಾಯಕ ಪ್ರತಿಮೆ ಬಳಿ ಹಯಗ್ರೀವ ಪ್ರಸಾದ ವಿತರಣೆ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಡಿ.ಕೆ.ಶಿವಕುಮಾರ್ ಅವರ ಯಶಸ್ಸು ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಒಕ್ಕಲಿಗರ ಒಕ್ಕೂಟದಿಂದ ಶಿವಮೊಗ್ಗ ಶರಾವತಿ ನಗರದ ಕಾಲಬೈರವೇಶ್ವರ ದೇವಾಲಯದಲ್ಲಿ ಒಕ್ಕೂಟದ ಅಧ್ಯಕ್ಷ ಗೋ.ರಮೇಶ್ ಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿ 101 ಈಡುಗಾಯಿಗಳನ್ನು ಒಡೆಯಲಾಯಿತು. ಒಕ್ಕೂಟದ ಗೌರವಾಧ್ಯಕ್ಷೆ ಶಾಂತಾ ಸುರೇಂದ್ರ, ಪ್ರಮುಖರಾದ ರಾಜಣ್ಣ, ನಿಂಗರಾಜ್, ದಿನೇಶ್, ಎಸ್.ಎಂ.ದೇವೇಂದ್ರ, ವಾಸಣ್ಣ, ಪ್ರತಿಮಾ ಡಾಕಪ್ಪ, ಸಂತೋಷ್, ಕೃಷ್ಣಪ್ಪ, ದಿವಾಕರ, ನರಸಿಂಹ, ಲಕ್ಷ್ಮಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net