ಆನಂದಪುರ: ಪಿಯುಸಿ ಹಂತದಲ್ಲಿ ಯಾವ ಕಾರಣಕ್ಕೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ಆಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ದಾಖಲಾಗುವುದಿಲ್ಲ. ಹಾಗಾಗಿ ಮುಂದಿನ ದಿನದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆದಿದೆ. ಸಾಕಷ್ಟು ಮೂಲ ಸೌಕರ್ಯ ಒದಗಿಸಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ನಡೆಸಿ ಸಾಧನೆ ಮಾಡಬೇಕು ಎಂದರು.
ಕನ್ನಡ ಉಪನ್ಯಾಸಕ ಡಾ. ರತ್ನಾಕರ ಕುನಗೋಡು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅಸಾಧ್ಯ ಎಂಬುದು ಇಲ್ಲವೇ ಇಲ್ಲ. ದೊಡ್ಡ ಗುರಿಯೊಂದಿಗೆ ಶ್ರಮ ವಹಿಸಿ ವ್ಯಾಸಂಗ ಮಾಡಿದರೆ ಸಾಧನೆ ಮಾಡಬಹುದು ಎಂದು ತಿಳಿಸಿದರು.