ವಿದ್ಯುತ್ ಸಮಸ್ಯೆಗೆ ಮೆಸ್ಕಾಂ ಹೊಣೆ | MLA Meeting

ಸಾಗರದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮರ್ಪಕ ಪೂರೈಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಜಯಕುಮಾರ್, ಮೌನೇಶ್ ಬಡಿಗೇರ್, ಎಚ್.ಕೆ.ನಾಗಪ್ಪ ಇತರರಿದ್ದರು.
ಸಾಗರದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮರ್ಪಕ ಪೂರೈಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಜಯಕುಮಾರ್, ಮೌನೇಶ್ ಬಡಿಗೇರ್, ಎಚ್.ಕೆ.ನಾಗಪ್ಪ ಇತರರಿದ್ದರು.
Published on
ಸಾಗರ: ರಾಜ್ಯದ ಜನತೆಗೆ ಬೆಳಕು ನೀಡಲು ಶರಾವತಿ ಹಿನ್ನೀರಿನ ಜನರು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಈ ಭಾಗದ ತುಮರಿ ಮತ್ತಿತರ ಗ್ರಾಮಗಳಲ್ಲಿ ಐದು ದಿನಗಳಿಂದ ವಿದ್ಯುತ್ ಇಲ್ಲ. ನಿಮ್ಮ ಮನೆಯಲ್ಲಿ ಒಂದು ತಾಸು ವಿದ್ಯುತ್ ಇಲ್ಲದಿದ್ದರೆ ಚಡಪಡಿಸುತ್ತೀರಿ. ಹೀಗಿದ್ದಾಗ ಹಿನ್ನೀರಿನ ಸಂತ್ರಸ್ತ ಜನರ ಗತಿ ಏನಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾಗರದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮರ್ಪಕ ಪೂರೈಕೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯುತ್ ಖಾಸಗೀಕರಣ ಬೇಡ ಎಂದು ನಿಮ್ಮ ಪರವಾಗಿ ಸರ್ಕಾರ ನಿಂತಿದೆ. ಆದರೆ ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಹೇಗೆ? ನಿಮ್ಮ ಇಂತಹ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳಿಗೆ ಅನುಕೂಲವಾದರೂ ಅಚ್ಚರಿಯಿಲ್ಲ ಎಂದರು.
ಎರಡ್ಮೂರು ದಿನಗಳ ಕಾಲ ಮಳೆ ಜತೆಗೆ ವಿಪರೀತ ಗಾಳಿ ಬೀಸಿದ್ದರಿಂದ 400ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಜಂಗಲ್ ಕಟಿಂಗ್ ಮಾಡದಿರುವುದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿ ಮೇಲೆ ಮರಗಳು ಬಿದ್ದಿವೆ. ಮೆಸ್ಕಾಂನಿಂದ 6 ವಾಹನ, 24 ಜನರನ್ನು ಹೆಚ್ಚುವರಿಯಾಗಿ ನೀಡಿದ್ದರೂ ಜಂಗಲ್ ಕಟ್ಟಿಂಗ್ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಉರಳಗಲ್ಲು ಗ್ರಾಮಕ್ಕೆ ವಿದ್ಯುತ್: ಅರಣ್ಯ ಕಾಯ್ದೆ ಕಟ್ಟುನಿಟ್ಟಾಗಿದ್ದು, ಸಂರಕ್ಷಿತ ಅರಣ್ಯದೊಳಗೆ ವಿದ್ಯುತ್ ತಂತಿ, ರಸ್ತೆ ನಿರ್ಮಿಸಲು ಸಮಸ್ಯೆ ಇದೆ. ಆದರೂ ಜೋಗದಿಂದ ಭಟ್ಕಳ ವಿದ್ಯುತ್ ಮಾರ್ಗ, ಜೆಜೆಎಂ ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಈತನಕ ವಿದ್ಯುತ್ ನೋಡದ ಉರಳಗಲ್ಲು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಅಂಡರ್‌ಗ್ರೌಂಡ್ ಮೂಲಕ ವಿದ್ಯುತ್ ಮಾರ್ಗ ಒಯ್ಯುವ ಯೋಜನೆ ಇದೆ. ಈಗಾಗಲೆ ಆ ಭಾಗಕ್ಕೆ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿ ಕೊಟ್ಟಿದೆ ಎಂದರು.
ತಾಪಂ ಇಒ ಮೌನೇಶ್ ಬಡಿಗೇರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಶ್ರೀನಿವಾಸಮೂರ್ತಿ, ಚಂದ್ರಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net