ಮೇಗರವಳ್ಳಿ ಶಾಲೆ ಅಮೃತ ಮಹೋತ್ಸವಕ್ಕೆ ಸಿದ್ಧತೆ

ಪಟೇಲ್ ವೆಂಕಟೇಶ ಹೆಗ್ಡೆ
ಪಟೇಲ್ ವೆಂಕಟೇಶ ಹೆಗ್ಡೆ
Published on
ತೀರ್ಥಹಳ್ಳಿ: ಮೇಗರವಳ್ಳಿಯ ಸರ್ಕಾರಿ ಪ್ರೌಢಶಾಲೆ ಆರಂಭವಾಗಿ 75 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಪ್ಲಾಟಿನಂ ಜ್ಯುಬಿಲಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಈ ಸವಿನೆನಪಿಗಾಗಿ ರಂಗಮಂದಿರ ನಿರ್ಮಾಣ ಮಾಡಲು ಯೋಚಿಸಲಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಟೇಲ್ ವೆಂಕಟೇಶ ಹೆಗ್ಡೆ ಹೇಳಿದರು.
1951ರಲ್ಲಿ ಸ್ಥಾಪನೆಯಾದ ಈ ಶಾಲೆ ಆಗುಂಬೆ ಹೋಬಳಿಯ ಮೊಟ್ಟ ಮೊದಲ ಪ್ರೌಢಶಾಲೆ. ಅಂದಿನಿಂದಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಹೊಂದಿದೆ. ಕಾರ್ಯಕ್ರಮ ಆಯೋಜನೆ ದಿನಾಂಕ ನಿಗದಿ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲು ನ.24ರಂದು ಮೇಗರವಳ್ಳಿಯಲ್ಲಿ ದೊಡ್ಡ ಮಟ್ಟದ ಸಭೆ ಕರೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಶಾಲೆಯಲ್ಲಿ ಕಲಿತವರು ಎತ್ತರದ ಸ್ಥಾನಮಾನದೊಂದಿಗೆ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ್ದು, ಅವರೆಲ್ಲರ ನೆರವು ಪ್ರಮುಖವಾಗಿದೆ. ಜತೆಗೆ ಊರಿನ ದಾನಿಗಳು ಈ ಮಹತ್ವದ ಕಾರ್ಯದಲ್ಲಿ ನಮ್ಮೊಂದಿಗೆ ನೆರವಾಗುವ ಭರವಸೆಯಿದೆ. ಜತೆಗೆ ಶಾಲೆಗೆ ಶಾಶ್ವತ ಆದಾಯ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಯೋಚನೆ ಇದೆ ಎಂದರು.
ಶಾಲೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ನಿವೃತ್ತ ಶಿಕ್ಷಕ ಡಾಕಪ್ಪ ಹೆಗ್ಡೆ ಮತ್ತು ತಾಪಂ ಮಾಜಿ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಮಾತನಾಡಿ, ತಾಲೂಕಿನಲ್ಲಿ ಖಾಸಗಿ ಶಾಲೆಗಳ ಭರಾಟೆ ನಡುವೆಯೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದೆ. ಈ ಆಚರಣೆ ಮೂಲಕ ಸರ್ಕಾರಿ ಶಾಲೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದರು. ಶಾಲಾಭಿವೃದ್ಧಿ ಸಮಿತಿಯ ವಿಜೇತ್, ರಿಯಾಜ್, ವಿಶ್ವನಾಥ್, ಪ್ರಭಾರ ಮುಖ್ಯ ಶಿಕ್ಷಕಿ ರಿಜ್ವಾನಾ ಖಾನಂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net