ಸಂಚಾರಿ ಪೀಠಕ್ಕೆ ಶಿವಮೊಗ್ಗದಲ್ಲಿ ಬೃಹತ್ ಜಾಗೃತಿ ಜಾಥಾ | HighCourt Mobile Bench

ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ಬಸಪ್ಪಗೌಡ
ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ಬಸಪ್ಪಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಸಂಚಾರಿ ಪೀಠ ಸ್ಥಾಪನೆಗೆ ನಿರಂತರ ಹೋರಾಟ
  • ಹೋರಾಟ ಸ್ವರೂಪ ಬದಲಾವಣೆಗೆ ನಿರ್ಧಾರ
  • ಸಮಿತಿ ಗೌರವಾಧ್ಯಕ್ಷ ಕೆ.ಬಸಪ್ಪಗೌಡ ಮಾಹಿತಿ
ಶಿವಮೊಗ್ಗ: ಮಧ್ಯ ಕರ್ನಾಟಕದ ಹೃದಯ ಭಾಗವಾಗಿರುವ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ(HighCourt Mobile Bench)ಸ್ಥಾಪನೆ ಮಾಡುವಂತೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳ ಸಹಕಾರದೊಂದಿಗೆ ಮೇ 30ರಂದು ಬೆಳಗ್ಗೆ 10.30ಕ್ಕೆ ನಗರದಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾರಿ ಪೀಠ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ಬಸಪ್ಪಗೌಡ ಹೇಳಿದರು.
ಜಿಲ್ಲಾ ವಕೀಲರ ಭವನದ ಎದುರು ನಡೆಸುತ್ತಿದ್ದ ಹೋರಾಟದ ಸ್ವರೂಪವನ್ನು ಇನ್ಮುಂದೆ ಬದಲಾಯಿಸಲು ಸಮಿತಿ ತೀರ್ಮಾನಿಸಿದೆ. ಅಂದು ಜಿಲ್ಲಾ ನ್ಯಾಯಾಲಯ(District Court)ದ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
11 ದಿನದಿಂದ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರ ಬೆಂಬಲ ಸಿಗುತ್ತಿರುವುದು ಮತ್ತಷ್ಟು ಶಕ್ತಿ ತುಂಬಿದೆ. ಶಿವಮೊಗ್ಗ(Shimogga) ಕೇಂದ್ರ ಸ್ಥಾನ ಆದರೆ ಅಕ್ಕಪಕ್ಕದ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಸಾರಿಗೆ ಸಂಪರ್ಕ ವ್ಯವಸ್ಥೆಯೂ ಉತ್ತಮವಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ ಮಾತನಾಡಿ, ಸಂಚಾರಿ ಪೀಠ ಸ್ಥಾಪನೆಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಮಂಗಳೂರು ಪೀಠಕ್ಕೆ ಸೇರಿಸುವಂತೆ ನಾವು ಮನವಿ ಕೊಟ್ಟಿರಲಿಲ್ಲ. ಆದರೂ ಶಿವಮೊಗ್ಗ ಸೇರಿಸಿಕೊಳ್ಳಲಾಗಿದೆ. ಇದು ಅನ್ಯಾಯ. ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಗೆ ಚಿಕ್ಕಮಗಳೂರು ಬಾರ್ ಅಸೋಸಿಯೇಷನ್(Chikmagalur Bar Association) ಒಪ್ಪಿಗೆ ನೀಡಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಪ್ರಮುಖರಾದ ಬಿ.ಗೋಪಿನಾಥ್, ಕೆ.ವಿ.ವಸಂತಕುಮಾರ್, ಆರ್.ಎಸ್.ಹಾಲಸ್ವಾಮಿ, ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಶಿವಬಸಪ್ಪ, ಸ್ವಾತಿ, ಲಕ್ಷ್ಮೀಕಾಂತ ಚಿಮಣೂರು, ರಾಜಪ್ಪ, ಶಿವಮೂರ್ತಿ, ಪ್ರದೀಪ್ ಸುದ್ದಿಗೋಷ್ಠಿಯಲ್ಲಿದ್ದರು.
"

ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳು, ವಕೀಲರ ಸಂಖ್ಯೆ, ಕಕ್ಷಿದಾರರ ಸಂಖ್ಯೆ ಗಮನಿಸಿದರೆ ಪೀಠ ಸ್ಥಾಪನೆಗೆ ಮಂಗಳೂರಿಗಿಂತ ಶಿವಮೊಗ್ಗವೇ ಪ್ರಶಸ್ತ್ಯ ಸ್ಥಳವಾಗಿದೆ. ನಾಲ್ಕು ನ್ಯಾಯಾಧೀಶರು ಕಾರ್ಯನಿರ್ವಹಿಸಲು ಬೇಕಾದ ಪ್ರಕರಣಗಳೂ ಶಿವಮೊಗ್ಗದಲ್ಲಿವೆ.

— ಕೆ.ಬಸಪ್ಪಗೌಡ, ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿ ಗೌರವಾಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net