ಭದ್ರಾವತಿ: ನಗರದ ಸಿಎನ್ ರಸ್ತೆ ಅಗಲೀಕರಣ ಕಾರ್ಯ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಮೂಲರಸ್ತೆ ಆಧಾರವಾಗಿ ಇಟ್ಟುಕೊಳ್ಳದೆ ಅಧಿಕಾರಿಗಳ ಇಚ್ಛಾನುಸಾರ ಅಳತೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಚನ್ನಗಿರಿ ರಸ್ತೆಯ ಮಳಿಗೆಗಳ ವರ್ತಕರು ಹಾಗೂ ಮಾಲೀಕರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಮಾಧವಚಾರ್ ವೃತ್ತದಿಂದ ರಂಗಪ್ಪ ವೃತ್ತದವರೆಗಿನ ರಸ್ತೆಯ ಎರಡು ಕಡೆ ತಲಾ 40 ಅಡಿ ಅಗಲೀಕರಣಕ್ಕೆ ನಗರಸಭೆ ಮುಂದಾಗಿರುವುದು ಸ್ವಾಗತಾರ್ಹ. ರಸ್ತೆ ಅಗಲೀಕರಣ ಮಾಡುವಾಗ ಮೂಲರಸ್ತೆಯನ್ನು ಪರಿಗಣಿಸಬೇಕು. ಪಿಡಬುೃಡಿ, ನಗರಸಭೆ ಒಟ್ಟಾಗಿ ನಿಂತು ತೆರವು ಮಾಡಬೇಕಾದ ಕಟ್ಟಡಗಳ ಗುರುತು ಮಾಡಬೇಕು. ತೆರವಾದ ಕಟ್ಟಡದ ಜಾಗಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮೊದಲು ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ ಸಭೆ ನಡೆಸಬೇಕು. ಸರ್ಕಾರದ ಅಧಿಕೃತ ಆದೇಶ, ತೆರವುಗೊಳಿಸಬೇಕಾದ ವಿವರ ಮತ್ತು ನೀಡುವ ಪರಿಹಾರದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ಬಗ್ಗೆ ನಿರ್ಧಾರವಾಗದೇ ನಗರಸಭೆ ಅಧಿಕಾರಿಗಳು ಮನಬಂದಂತೆ ಅಳತೆ ಮಾಡಿ ಮಾಲೀಕರೊಂದಿಗೆ ದುರ್ವತನೆ ತೋರುತ್ತಿದ್ದಾರೆ ಎಂದು ದೂರಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಪೌರಾಯುಕ್ತ ಕೆ.ಎನ್.ಹೇಮಂತ್ ಅವರನ್ನು ಕರೆಸಿ ರಸ್ತೆ ಅಗಲೀಕರಣ ತೆರವು ಕಾರ್ಯಾಚರಣೆ ಕುರಿತು ಚರ್ಚಿಸಿದರು. ಕಟ್ಟಡಗಳ ತೆರವು ವಿಚಾರದಲ್ಲಿ ಮಾಲೀಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಅವರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕೆಲಸ ಮಾಡಬೇಕು. ಕಟ್ಟಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಕೆ.ಎಚ್.ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಸತೀಶ್, ರಾಜಶೇಖರ್, ನಗರಸಭೆ ಅಧಿಕಾರಿ, ಸಿಬ್ಬಂದಿ, ಸಿಎನ್ ರಸ್ತೆ ವರ್ತಕರು, ಕಟ್ಟಡ ಮಾಲೀಕರು ಇದ್ದರು.