ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಜಿ.ಭೀಮೇಶ್ವರ ಜೋಷಿ ಅಭಿಮತ
ಶಿವಮೊಗ್ಗ: ದೇವರ ಸನ್ನಿಧಿಗೆ ತೆರಳುವಾಗ, ದರ್ಶನ ಪಡೆಯುವಾಗ ಭಕ್ತರ ಅಂತರಂಗ ಪರಿಶುದ್ಧವಾಗಿ, ಆಲೋಚನೆ ರಹಿತವಾಗಿ ಇರಬೇಕು. ಶ್ರದ್ಧಾಭಕ್ತಿಯನ್ನು ಸಮರ್ಪಿಸಿದಾಗ ಮಾತ್ರ ಬದುಕು ಧನ್ಯತಾಭಾವ ಮತ್ತು ಪರಿಪೂರ್ಣತೆ ಕಾಣಲಿದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಜಿ.ಭೀಮೇಶ್ವರ ಜೋಷಿ(Dr. G.Bhimeshwar Joshi) ಅಭಿಪ್ರಾಯಪಟ್ಟರು.
ನಗರದ ಕೋಟೆ ರಸ್ತೆಯ ಶ್ರೀ ಮಾರಿಕಾಂಬಾ ದೇವಸ್ಥಾನ(Marikamba Temple)ದ ಆವರಣದಲ್ಲಿ ಶುಕ್ರವಾರ ಶ್ರೀ ಮಾರಿಕಾಂಬ ಸೇವಾ ಸಮಿತಿ ಆಶ್ರಯದಲ್ಲಿ ಮಾರಿಕಾಂಬೆಗೆ ಸ್ವರ್ಣ ಕವಚ(Golden Kavach) ಹಾಗೂ ಗರ್ಭಗುಡಿಗೆ ರಜತದ್ವಾರ ಸಮರ್ಪಿಸಿ ಆರ್ಶೀವಚನ ನೀಡಿದ ಅವರು, ದೇವರ ಮುಂದೆ ನಾವೆಲ್ಲರೂ ಮಗುವಿನಂತೆ ವರ್ತಿಸಬೇಕು. ಆಗ ಮಾತ್ರ ದೇವಿ ತಾಯಿ ಹೃದಯದಿಂದ ನಮ್ಮನ್ನು ಹರಸುತ್ತಾಳೆ. ಏನನ್ನು ಬೇಡಿಕೊಳ್ಳದಿದ್ದರೂ ನಮ್ಮ ಇಷ್ಟಾರ್ಥಗಳೂ ಪ್ರಾಪ್ತಿ ಆಗಲಿವೆ ಎಂದರು.
ದೇವಾನುದೇವತೆಗಳಲ್ಲಿ ಸೌಮ್ಯ ಸ್ವಭಾವ ಕಾಣುತ್ತೇವೆ. ಅದರಲ್ಲಿ ಮಾರಿಕಾಂಬೆಯೂ ಶಾಂತ ಸ್ವರೂಪಿ. ಆದರೆ ದೇವಿಯ ಕಣ್ಣುಗಳು ಮಾತ್ರ ಉಗ್ರ ಸ್ವರೂಪದಲ್ಲಿ ಗೋಚರಿಸುತ್ತವೆ. ಭಕ್ತರು ತಪ್ಪಾಗಿ ನಡೆದಾಗ ಉಗ್ರದೃಷ್ಟಿ(Extremism) ಬೀರುತ್ತಾಳೆ. ಸನ್ಮಾರ್ಗದಲ್ಲಿ ನಡೆದರೆ ಮಾತೃಹೃದಯ(Mother's heart)ದಿಂದ ಆಶೀರ್ವದಿಸುತ್ತಾಳೆ. ದೇವರ ಬಳಿ ನಾವು ಏನನ್ನೂ ಬೇಡಿಕೊಳ್ಳಬಾರದು. ಬದಲಾಗಿ ನಾನು ಯಾವುದಕ್ಕೆ ಅರ್ಹನಿದ್ದೇನೋ ಅದೆಲ್ಲವನ್ನೂ ಅನುಗ್ರಹಿಸುವಂತೆ ಕೇಳಿಕೊಂಡರೆ ದೇವಿ ಸಂತುಷ್ಟಳಾಗಿ ಎಲ್ಲವನ್ನೂ ದಯಪಾಲಿಸುತ್ತಾಳೆ. ಅದು ಕೊಡು, ಇದು ಕೊಡೆಂದು ಬೇಡಿದರೆ ದೇವಿ ಏನನ್ನೂ ಅನುಗ್ರಹಿಸಲ್ಲ ಎಂದು ಹೇಳಿದರು.
ಇದೇ ವೇಳೆ ಸ್ವರ್ಣ ಕವಚ ಮತ್ತು ರಜತ ದ್ವಾರ(Silver Gate)ದ ಕಲಾವಿದರಾದ ಪ್ರಶಾಂತ್, ಅಜಿತ್ ಹಾಗೂ ನಿರಂಜನ್ ದಂಪತಿಯನ್ನು ಸನ್ಮಾನಿಸಲಾಯಿತು. ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಸಮಿತಿ ಮುಖಂಡರಾದ ಉಮಾಪತಿ, ಎಸ್.ಸಿ.ಲೋಕೇಶ್, ಸುನಿಲ್, ಚಂದ್ರಶೇಖರ್, ತಿಮ್ಮಪ್ಪ, ಸುರೇಶ್‌ಕುಮಾರ್, ಸೀತಾರಾಮ್, ರಾಜಲಕ್ಷ್ಮೀ ಜೋಷಿ, ಜಯಲಕ್ಷ್ಮೀ ಈಶ್ವರಪ್ಪ ಉಪಸ್ಥಿತರಿದ್ದರು.
ಐತಿಹಾಸಿಕ ಕಾರ್ಯಕ್ರಮ
ಕೋಟೆ ಮಾರಿಕಾಂಬೆ ದೇವಿಗೆ ಸ್ವರ್ಣ ಕವಚ ಮತ್ತು ಬೆಳ್ಳಿಯ ದ್ವಾರ ಸಮರ್ಪಣೆ ಆಗಿರುವುದು ಶಿವಮೊಗ್ಗದಲ್ಲಿ ಐತಿಹಾಸಿಕವಾಗಿದೆ ಎಂದು ಶ್ರೀ ಮಾರಿಕಾಂಬಾ ದೇವಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಹೇಳಿದರು. ಗ್ರಾಮದೇವತೆಯಾಗಿದ್ದ ಮಾರಿಕಾಂಬೆ ಇಂದು ನಗರ ದೇವತೆಯಾಗಿದ್ದಾಳೆ. ಸಮಿತಿಯ ತೀರ್ಮಾನದಂತೆ ಬಹಳ ವರ್ಷಗಳ ಸಂಕಲ್ಪವಾಗಿದ್ದ ಬಂಗಾರದ ಮುಖವಾಡ(Golden mask)ವನ್ನು ದೇವಿಗೆ ಅರ್ಪಿಸಲಾಗಿದೆ. ಇದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ ಅನೇಕರು ಸಹಕರಿಸಿದ್ದಾರೆ ಎಂದು ಸ್ಮರಿಸಿದರು.
"
ಮೊದಲು ಈ ಸ್ಥಳದಲ್ಲಿ ಮಾರಿ ಗದ್ದುಗೆ ಮಾತ್ರ ಇತ್ತು. ಇದೀಗ ಆಡಳಿತ ಮಂಡಳಿಯ ಪರಿಶ್ರಮ, ಕಾರ್ಯವೈಖರಿಯಿಂದ ಸುಂದರವಾದ ದೇವಸ್ಥಾನವಾಗಿದೆ. ಶ್ರದ್ಧಾಭಕ್ತಿಯ ಕೇಂದ್ರವಾಗಿ ರೂಪುಗೊಂಡಿದೆ. ಅಮ್ಮನವರ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಎಲ್ಲ ಸಂಗತಿಗಳನ್ನು ಒಗ್ಗೂಡಿಸುವ ಕೆಲಸವನ್ನು ಸಮಿತಿ ಅಚ್ಚುಕಟ್ಟಾಗಿ ಮಾಡಿದೆ.
— ಎಸ್.ಎನ್.ಚನ್ನಬಸಪ್ಪ, ಶಾಸಕ
"
ದೇವಸ್ಥಾನದ ಆಡಳಿತ ಮಂಡಳಿ ಕೇವಲ ಮಾರಿಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ವರ್ಷಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಲೇ ಇದೆ. ಜತೆಗೆ ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.