ಮೆರುಗು ಪಡೆದ ಮಾರಿಕಾಂಬೆ ಜಾತ್ರೆ | Marikambe fair

ಮಾರಿಕಾಂಬೆಯನ್ನು ತವರುಮನೆಯಿಂದ ಗಂಡನ ಮನೆಗೆ ರಾಜಬೀದಿ ಉತ್ಸವದ ಮೂಲಕ ಕರೆತರುತ್ತಿರುವುದು.
ಮಾರಿಕಾಂಬೆಯನ್ನು ತವರುಮನೆಯಿಂದ ಗಂಡನ ಮನೆಗೆ ರಾಜಬೀದಿ ಉತ್ಸವದ ಮೂಲಕ ಕರೆತರುತ್ತಿರುವುದು.
Published on
ಸಾಗರ: ಸಾಗರದ ಮಾರಿಕಾಂಬಾ ದೇವಿಯ ಭವ್ಯ ಮೂರ್ತಿಯನ್ನು ಬುಧವಾರ ಬೆಳಗ್ಗೆ ಗಂಡನಮನೆ ದೇವಸ್ಥಾನದ ಮಂಟಪದ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಮಂಗಳವಾರ ರಾತ್ರಿ 11 ಗಂಟೆ ನಂತರ ತವರುಮನೆ ದೇವಸ್ಥಾನದಿಂದ ಅಮ್ಮನವರ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತವಾದ ರಥದಲ್ಲಿ ಪ್ರತಿಷ್ಠಾಪಿಸಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ತವರುಮನೆ ದೇವಸ್ಥಾನದಲ್ಲಿ ಪೋತರಾಜನ ಚಾಟಿ ಸೇವೆ ಮೂಲಕ ಉತ್ಸವ ಮೂರ್ತಿ ಮೆರವಣಿಗೆ ಆರಂಭವಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಬುಧವಾರ ಮುಂಜಾನೆ 6ಕ್ಕೆ ಗಂಡನಮನೆ ತಲುಪಿತು.
ಮೆರವಣಿಗೆಯಲ್ಲಿ ಹುಲಿವೇಷ, ಬೆದರುಗೊಂಬೆ, ಚಂಡೆ, ಡೊಳ್ಳು, ಕೀಲುಕುದುರೆ, ನಂದಿಧ್ವಜ ಕುಣಿತ ಮತ್ತಿತರ ಕಲಾ ತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾತ್ರಿಯಾದರೂ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಗಂಡನಮನೆ ದೇವಸ್ಥಾನದ ಎದುರು ನಿರ್ಮಿಸಿರುವ ಜೋಧ್‌ಪುರ ಶೈಲಿಯ ಭವ್ಯ ಮಂಟಪದೊಳಗಿನ ಗದ್ದುಗೆಯಲ್ಲಿ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಅಮ್ಮನವರಿಗೆ ಕೋರೆಹಲ್ಲು ಬರೆಯುವ ಶಾಸ್ತ್ರ ನಡೆಯಿತು. ಮೆರವಣಿಗೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಜನರೊಂದಿಗೆ ಬೆರೆತು ಡೊಳ್ಳು ಕುಣಿತದ ತಂಡದ ಜತೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಶಾಸಕ ಗೋಪಾಲಕೃಷ್ಣ ಬೇಳೂರು, ಮಾರಿಕಾಂಬೆ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಸಂಚಾಲಕರಾದ ಪುರುಷೋತ್ತಮ, ರವಿ ನಾಯ್ಡು, ಲೋಕೇಶಕುಮಾರ್, ರಾಮು, ನಾಗರಾಜ್, ಸೋಮಶೇಖರ್, ತಾರಾಮೂರ್ತಿ, ಚಂದ್ರು , ನವೀನ್, ಅಶೋಕಕುಮಾರ್, ಶಶಿಕಾಂತ್, ಬಸವರಾಜ್ ಇತರರಿದ್ದರು.
ಭಕ್ತರಿಗೆ ಊಟದ ವ್ಯವಸ್ಥೆ: ಗಂಡನಮನೆ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ರವಿ ಪೋತರಾಜ ಅವರಿಂದ ವಿಶೇಷ ಪೂಜೆ ನಡೆಯಿತು. ವಿವಿಧ ಸಮಾಜದವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಮಾರಿಕಾಂಬ ಜಾತ್ರೆ ಸಮಿತಿಯಿಂದಲೂ ವೀರಶೈವ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಾರಿಕಾಂಬಾ ದೇವಸ್ಥಾನದ ಪಕ್ಕದ ಸಂಕೀರ್ಣದಲ್ಲಿ ಸ್ನೇಹಿತರು ಸಾಗರ ತಂಡವು ಈ ವರ್ಷವೂ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಸಮಿತಿಯ ಸದಸ್ಯರು ಪ್ರಚಾರ ಬಯಸದೆ ನಿರಂತರವಾಗಿ ಈ ಸೇವಾ ಕಾರ್ಯ ಮಾಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net