ತೀರ್ಥಹಳ್ಳಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಮಾರಿಕಾಂಬಾ ಜಾತ್ರೆ ೆ.17ರಿಂದ 25ರವರೆಗೆ ಜರುಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ ಹೇಳಿದರು.
17ರಂದು ಮಾರಿ ಸಾರುವುದು, ನಿತ್ಯದ ಪೂಜೆಯೊಂದಿಗೆ ಚಂಡಿಕಹೋಮ, ರಂಗಪೂಜೆ ನಡೆಯಲಿವೆ. 9 ದಿನಗಳ ಪರ್ಯಂತ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಜಾತ್ರೆಗೆ ಅಂದಾಜು 80 ಲಕ್ಷ ರೂ. ವೆಚ್ಚವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
18ರಿಂದ ದಿನನಿತ್ಯ ಸಂಜೆ 6ರಿಂದ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಾಡಿನ ಖ್ಯಾತ ಕಲಾವಿದರು ಪ್ರಸ್ತುತಪಡಿಸುವ ಸಂಗೀತದೊಂದಿಗೆ ಚಿತ್ತಾರದ ಅನಾವರಣ, ಕಾವ್ಯ-ಸಂಗೀತ ಕಲಾಕುಂಚ, ನೃತ್ಯರೂಪಕಗಳು, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನ, ರಾಜಗುರು ಹೊಸಕೋಟೆ ತಂಡದವರ ಜಾನಪದ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.
24ರಂದು ರಾತ್ರಿ 8ಕ್ಕೆ ಎಣ್ಣೆ ಭಂಡಾರ ಪೂಜೆಯೊಂದಿಗೆ ಸಂಪ್ರದಾಯದಂತೆ ನಾಡ್ತಿ ಆಚಾರ್ ಕುಟುಂಬದವರು ಕೆತ್ತನೆ ಮಾಡುವ ಗೊಂಬೆಪೂಜೆ, ಪಟ್ಟಣದಲ್ಲಿ ಮೆರವಣಿಗೆಯ ನಂತರ ಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು. 25ರಂದು ಮಧ್ಯಾಹ್ನ 3ಗಂಟೆಗೆ ರಾಜಬೀದಿ ಉತ್ಸವದೊಂದಿಗೆ ಕುಶಾವತಿಯ ತುಂಗಾ ನದಿಯಲ್ಲಿ ಗೊಂಬೆ ವಿಸರ್ಜನೆ ಮಾಡಲಾಗುವುದು ಎಂದರು.
ಧರ್ಮದರ್ಶಿ ಮಂಡಳಿ ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ಮಂಜುನಾಥ ಶೆಟ್ಟಿ, ಧರ್ಮದರ್ಶಿ ಮಂಡಳಿಯ ಸಂದೇಶ್ ಜವಳಿ, ಎಂ.ಎ.ಪ್ರಭಾಕರ್, ಚಂದ್ರಶೇಖರ್, ಧನಂಜಯ, ಚಿದಾನಂದ, ಜಯಪ್ರಕಾಶ ಶೆಟ್ಟಿ, ನಾಗಪ್ಪಾಚಾರ್, ಅನಿಲ್, ನಾಗರಾಜ, ಮೊಕ್ತೇಸರ ಜಯರಾಮ ಶೆಟ್ಟಿ ಇತರರಿದ್ದರು.