ಅಣು ಸ್ಥಾವರ ವಿರೋಧಿಸಿ ಪಾದಯಾತ್ರೆ | Opposition to the project

ಬೇಸೂರು ಅಣು ವಿದ್ಯುತ್ ಯೋಜನೆ ವಿರೋಧಿಸಿ ಹೋರಾಟ ಸಮಿತಿ ಪ್ರಮುಖರು ಸಾಗರದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಆನಂದಪುರ ಶ್ರೀಗಳು, ಮೂಲೆಗದ್ದೆ ಶ್ರೀಗಳು, ಬಿ.ವೈ.ರಾಘವೇಂದ್ರ, ಗೋಪಾಲಕೃಷ್ಣ ಬೇಳೂರು, ಹರತಾಳು ಹಾಲಪ್ಪ, ಇಂದೂಧರ ಬೇಸೂರು, ತೀ.ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ ಇತರರಿದ್ದರು.
ಬೇಸೂರು ಅಣು ವಿದ್ಯುತ್ ಯೋಜನೆ ವಿರೋಧಿಸಿ ಹೋರಾಟ ಸಮಿತಿ ಪ್ರಮುಖರು ಸಾಗರದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಆನಂದಪುರ ಶ್ರೀಗಳು, ಮೂಲೆಗದ್ದೆ ಶ್ರೀಗಳು, ಬಿ.ವೈ.ರಾಘವೇಂದ್ರ, ಗೋಪಾಲಕೃಷ್ಣ ಬೇಳೂರು, ಹರತಾಳು ಹಾಲಪ್ಪ, ಇಂದೂಧರ ಬೇಸೂರು, ತೀ.ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ ಇತರರಿದ್ದರು.
Published on
ಸಾಗರ: ತಾಲೂಕಿನ ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಹೋರಾಟ ಸಮಿತಿ ಕರೆಕೊಟ್ಟಿದ್ದ ಪಾದಯಾತ್ರೆ ಬೆಂಬಲ ದೊರೆಯಿತು. ನೂರಾರು ಜನರು ಸುಡುವ ಬಿಸಿಲಿನಲ್ಲೂ ದಣಿವರಿಯದೆ 25 ಕಿ.ಮೀ ನಡೆದು ಏಸೂರು ಕೊಟ್ಟರೂ ಬೇಸೂರು ಕೊಡೆವು ಎಂದು ಘೋಷಣೆ ಕೂಗಿದರು.
ಬೇಸೂರಿನ ಬಸವಣ್ಣ ದೇವಸ್ಥಾನದಿಂದ ಬೆಳಗ್ಗೆ 9ಕ್ಕೆ ಗಂಟೆಗೆ ಪಾದಯಾತ್ರೆಗೆ ತಾಳಗುಪ್ಪ ಕೂಡ್ಲಿಮಠದ ಶ್ರೀಗಳು ಮತ್ತು ಮೂಲೆಗದ್ದೆ ಮಠದ ಶ್ರೀಗಳು ಚಾಲನೆ ನೀಡಿದರು. ಯಾವ ಕಾರಣಕ್ಕೂ ಮಲೆನಾಡು ಭಾಗದಲ್ಲಿ ಯೋಜನೆ ಬೇಡ. ಯೋಜನೆಯನ್ನು ರದ್ದುಪಡಿಸಿ ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಒತ್ತಾಯಿಸಿದರು.
ಪಾದಯಾತ್ರೆ ಸಾಗಿ ಬಂದ ಗ್ರಾಮಗಳಲ್ಲಿ ಭಾರಿ ಬೆಂಬಲ ದೊರೆಯಿತು. ಗ್ರಾಮಸ್ಥರು ತಮ್ಮೂರಿಗೆ ಪಾದಯಾತ್ರೆ ಬಂದಾಗ ಘೋಷಣೆ ಮೂಲಕ ಸ್ವಾಗತಿಸಿ, ತಾವೂ ಸಹ ಹೆಜ್ಜೆಹಾಕುತ್ತಿದ್ದರು. ಕೆಲವು ಗ್ರಾಮಗಳಲ್ಲಿ ಮಕ್ಕಳು ಸಹ ಆಗಮಿಸಿದರು. ಕುಡಿಯುವ ನೀರು, ಮಜ್ಜಿಗೆ, ಉಪಾಹಾರ ಕೊಡುವ ಮೂಲಕ ಸಹಕಾರ ನೀಡಿದರು.
ಮೆರವಣಿಗೆಯು ಇಕ್ಕೇರಿ ಅಘೋರೇಶ್ವರ ವೃತ್ತಕ್ಕೆ ಬರುತ್ತಿದ್ದಂತೆ ಸಾಗರದ ನಾಗರಿಕರು ಸಹ ಪಾದಯಾತ್ರೆಯನ್ನು ಸೇರಿಕೊಂಡರು. ಸಾಗರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿ ತಲುಪಿದಾಗ ಒಕ್ಕೊರಲಿನಿಂದ ಬೇಸೂರು ಅಣು ವಿದ್ಯುತ್ ಯೋಜನೆ ಬೇಡ ಎಂದು ಒತ್ತಾಯಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ. ಇದು ರೈತರ ಉಳಿವಿಗಾಗಿ ನಡೆಯುತ್ತಿರುವ ಪಕ್ಷಾತೀತ ಹೋರಾಟ. ಬೇಸೂರು ಅಣು ವಿದ್ಯುತ್ ಸ್ಥಾವರ ಬೇಡ ಎಂದು ಕೇಂದ್ರಕ್ಕೆ ನಾನು ಮನವಿ ಮಾಡುತ್ತೇನೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರಾಜ್ಯದ ಮೇಲೆ ಒತ್ತಡ ತರಲಿ. ಯಾವ ಕಾರಣಕ್ಕೂ ಯೋಜನೆ ಜಾರಿಗೆ ತರದಂತೆ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ಶಾಸಕ ಸ್ಥಾನದ ಚಿಂತೆಯಿಲ್ಲ: ಬೇಸೂರಿನಲ್ಲಿ ಯೋಜನೆ ಅನುಷ್ಠಾನ ಆಗದಂತೆ ಸಂಸದರು ಕೇಂದ್ರದ ಹಂತದಲ್ಲಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಒಪ್ಪಿಗೆ ನೀಡದಂತೆ ರಾಜ್ಯ ಸರ್ಕಾರಕ್ಕೆ ನಾನೂ ಸಹ ಮನವಿ ಮಾಡಿದ್ದೇನೆ. ನನ್ನ ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ. ರೈತರ ಪರವಾಗಿ ಯೋಜನೆ ವಿರುದ್ಧ ಹೋರಾಟ ಮಾಡುತ್ತೇನೆ. ಮನುಕುಲದ ನಾಶದ ಯೋಜನೆಗಳು ಯಾವ ಕಾರಣಕ್ಕೂ ಇಲ್ಲಿ ಆರಂಭಿಸಲು ಬಿಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಪ್ರಸನ್ನ ಕೆರೆಕೈ, ತೀ.ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ, ಮೈತ್ರಿ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net