ಎಸ್‌ಐಆರ್ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ರಾಷ್ಟ್ರಭಕ್ತರ ಬಳಗದಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಇ.ವಿಶ್ವಾಸ್, ಸುವರ್ಣಾ ಶಂಕರ್, ಲಕ್ಷ್ಮೀ ಶಂಕರನಾಯ್ಕ, ಶ್ರೀಕಾಂತ್, ಶಿವಾಜಿ ಇದ್ದರು.
ಶಿವಮೊಗ್ಗ: ಎಸ್‌ಐಆರ್ (sir) ಪ್ರಕ್ರಿಯೆ ಸಂದರ್ಭ ಅನೇಕ ಸಮಸ್ಯೆಗಳು ಕಂಡುಬಂದಿವೆ. ಇದಕ್ಕೆ ಚುನಾವಣಾ ಆಯೋಗ (election comission) ಪರಿಹಾರ ಕಂಡುಕೊಳ್ಳಬೇಕು. ಮುಖ್ಯವಾಗಿ ಆಯೋಗ ವೆಬ್‌ಸೈಟ್‌ನಲ್ಲಿರುವ (website) ತೊಡಕುಗಳನ್ನು ನಿವಾರಿಸಬೇಕೆಂದು ಒತ್ತಾಯಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಚುನಾವಣಾ ಆಯೋಗದ ವೆಬ್‌ಸೈಟ್ ಪದೇಪದೆ ಸ್ಥಗಿತಗೊಳ್ಳುತ್ತಿದೆ. ಕರ್ನಾಟಕ ವೋಟರ್ ಸರ್ಚ್‌ನಲ್ಲಿ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ವಿಭಾಗದಲ್ಲಿ 2002ರ ಮತದಾರರ ವಿವರ ಹುಡುಕಿದಾಗ ಒಂದು ಭಾಗ ಸಂಖ್ಯೆಯಲ್ಲಿ ಮೊದಲ 500 ಮತದಾರರನ್ನು ಮಾತ್ರ ತೋರಿಸುತ್ತದೆ. ಕ್ರಮ ಸಂಖ್ಯೆ 500ರ ನಂತರದ ಮತದಾರರ ಹೆಸರುಗಳು ದೊರೆಯುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ಚ್ ಬೈ ಎಲೆಕ್ಟರ್ ವಿಭಾಗದಲ್ಲಿ ವಿಧಾನಸಭಾ ಕ್ಷೇತ್ರವಾರು ಮತದಾರರನ್ನು ಹುಡುಕುವಾಗ ಹೆಸರು ಒಂದಕ್ಕೊಂದು ತಾಳೆಯಾಗುವ ಮತದಾರರ ವಿವರಗಳು 100ಕ್ಕೆ ಸೀಮಿತವಾಗಿರುತ್ತದೆ. 100ರ ನಂತರದ ಹೆಸರುಗಳು ದೊರೆಯುತ್ತಿಲ್ಲ ಎಂದು ದೂರಿದರು.
ಶಿವಮೊಗ್ಗ ನಗರದ ಅದರಲ್ಲೂ ಹಳೇ ಶಿವಮೊಗ್ಗ ಭಾಗದಲ್ಲಿ ದಶಕಗಳಿಂದ ವಾಸವಿರುವ ಹಲವು ಕುಟುಂಬ ಸದಸ್ಯರ ಮಾಹಿತಿಯು 2002ರ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ಲಭ್ಯವಿರುವುದಿಲ್ಲ. ಕೆಲ ಬಿಎಲ್‌ಒಗಳು ಮತದಾರರಿಂದ ಎನ್ಯುಮರೇಷನ್ ಫಾರ್ಮ್‌ನಲ್ಲಿ ಪೂರ್ಣ ಮಾಹಿತಿ ಭರ್ತಿ ಮಾಡದೆ ಕೇವಲ ಸಹಿ ಹಾಕಿಸಿಕೊಂಡು ಹಿಂಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಬಹಳಷ್ಟು ಮತದಾರರಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ತಲುಪಿಸಿಲ್ಲ. ಹೀಗಾಗಿ ಎಲ್ಲರೂ ನಮ್ಮ ಎಸ್‌ಐಆರ್ ಸೇವಾ ಕೇಂದ್ರಕ್ಕೆ ಬಂದು ಎನ್ಯುಮರೇಷನ್ ಫಾರ್ಮ್‌ಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಪರಿಹಾರ ಸೂಚಿಸಬೇಕೆಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮಾಜಿ ಮೇಯರ್‌ಗಳಾದ ಲಕ್ಷ್ಮೀ ಶಂಕರನಾಯ್ಕ, ಸುವರ್ಣಾ ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಶಿವಾಜಿ, ಶ್ರೀಕಾಂತ್, ಮೋಹನ್ ಜಾಧವ್, ಸೀತಾಲಕ್ಷ್ಮೀ ಇತರರಿದ್ದರು.