ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸೊರಬದಲ್ಲಿ ವ್ಯಾಪಕ ನಷ್ಟ
ಅರವಿಂದ ಅಕ್ಲಾಪುರ ಶಿವಮೊಗ್ಗ
ಮುಂಗಾರು ನಿಗದಿತ ಸಮಯಕ್ಕೆ ಆಗಮಿಸದಿರುವುದರಿಂದ ಕಂಗೆಟ್ಟಿರುವ ಮೆಕ್ಕೆಜೋಳ (maize) ಬೆಳೆಗಾರರಿಗೆ ಈಗ ಲದ್ದಿ ಹುಳು ಆತಂಕ (tension) ಆವರಿಸಿದೆ. ಚಿಗುರೊಡೆದ ಮೆಕ್ಕಜೋಳದ ಸಸಿಗಳು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಲದ್ದಿ ಹುಳುವಿಗೆ ಆಹಾರ (food) ವಾಗುತ್ತಿವೆ.
ಮುಖ್ಯವಾಗಿ ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ ಹಾಗೂ ಸೊರಬ ಭಾಗದಲ್ಲಿ ಲದ್ದಿ ಹುಳು ಕಾಟ ಆರಂಭವಾಗಿದೆ. ಈಗಾಗಲೇ ರೈತರು ನಿಯಂತ್ರಣಕ್ಕೆ ಕೀಟನಾಶಕಗಳ ಮೊರೆ ಹೋಗುತ್ತಿದ್ದಾರೆ. ಒಮ್ಮೆ ಈ ಹುಳುಗಳು ಹೊಲದಲ್ಲಿ ಕಾಣಿಸಿಕೊಂಡರೆ ಒಂದೇ ರಾತ್ರಿಗೆ ಹೆಕ್ಟೇರ್‌ಗಟ್ಟಲೆ ಬೆಳೆ ನಾಶ ಮಾಡುತ್ತವೆ.
ಮುಂಗಾರು ಮಳೆ ನಿರೀಕ್ಷೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದವರು ಮಳೆ ಕೈಕೊಟ್ಟರೂ ಕಷ್ಟಪಟ್ಟು ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇದರ ನಡುವೆ ಹವಾಮಾನದಲ್ಲಿ ವೈಪರೀತ್ಯ ಲದ್ದಿ ಹುಳುಗಳ ಸಂತಾನ ವೃದ್ಧಿಗೆ ಪೂರಕವಾಗಿದೆ. ಹೀಗಾಗಿ ರೈತರಿಗೆ ಮಳೆ ಕೊರತೆ ಜತೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಲದ್ದಿ ಹುಳು ಮೆಕ್ಕೆಜೋಳ, ಭತ್ತ, ರಾಗಿ, ನವಣೆ ಮುಂತಾದ ಬೆಳೆಗಳ ಮೇಲೆ ದಾಳಿ ನಡೆಸುತ್ತದೆ. ಆರಂಭದಲ್ಲಿ ಹಸಿರಾಗಿರುವ ಎಲೆಗಳನ್ನು ತಿನ್ನುವ ಸೈನಿಕ ಹುಳು ಕ್ರಮೇಣ ದಂಟನ್ನೇ ತಿನ್ನುತ್ತದೆ. ಒಂದು ವೇಳೆ ಕಾಳು ಕಟ್ಟುವ ಸಮಯದಲ್ಲಿ ಈ ಹುಳು ಕಾಣಿಸಿಕೊಂಡರೆ ರೈತರಿಗೆ ಖರ್ಚು ಮಾಡಿದ ಹಣ ಸಿಗುವುದೂ ಕಷ್ಟ.
ಪರಿಹಾರವೂ ಕಷ್ಟ
ಅನೇಕ ಕಡೆಗಳಲ್ಲಿ ಮುಂಗಾರು ನಂಬಿಕೊಂಡು ಬಿತ್ತನೆ ಮಾಡಿದ ಮೆಕ್ಕೆಜೋಳ ಬಿಸಿಲಿಗೆ ಒಣಗಿ ಹೋಗಿದೆ. ಇನ್ನು ಹಲವೆಡೆ ಅಲ್ಪಸ್ವಲ್ಪ ಚಿಗುರಿದ ಮೆಕ್ಕೆಜೋಳಕ್ಕೆ ಲದ್ದಿ ಹುಳು ಕಾಟ ಕಾಣಿಸಿಕೊಂಡಿದೆ. ಏಳೆಂಟು ವರ್ಷಗಳ ಹಿಂದೆಯೂ ಇದೇ ರೀತಿ ಲದ್ದಿ ಹುಳು ಕಾಟಕ್ಕೆ ಜಿಲ್ಲೆಯಲ್ಲಿ ರೈತರು ವ್ಯಾಪಕ ನಷ್ಟ ಅನುಭವಿಸಿದ್ದರು. ಆಗಲೂ ಅವರಿಗೆ ಪರಿಹಾರ ದೊರೆತಿರಲಿಲ್ಲ. ಈಗಲೂ ಸೂಕ್ತ ಪರಿಹಾರ ದೊರೆಯುವ ನಿರೀಕ್ಷೆಗಳಿಲ್ಲ.
ಮಳೆಯೊಂದೇ ಪರಿಹಾರ
ಒಂದು ಗಿಡದ ಸುಳಿಯೊಳಗೆ 200-300 ಮೊಟ್ಟೆಗಳಿದ್ದರೆ ಅವುಗಳಲ್ಲಿ ಮೂರ‌್ನಾಲ್ಕು ಮರಿಗಳು ಮಾತ್ರ ಹೊರಕ್ಕೆ ಬರುತ್ತವೆ. ಮೂರು ದಿನಕ್ಕೆ ಮೊಟ್ಟೆಯೊಡೆದು ಮರಿಯಾಗಿ ಲದ್ದಿ ಹುಳು ಅನಿಸಿಕೊಳ್ಳುವ ಇದು 8 ದಿನಕ್ಕೆ ಪ್ರೌಢಾವಸ್ಥೆ ತಲುಪಿ ಹಾರಿಹೋಗುತ್ತದೆ. ಅಷ್ಟರೊಳಗೆ ಸಾಕಷ್ಟು ಅನಾಹುತ ಉಂಟುಮಾಡುತ್ತವೆ. ಇಂದು ಲದ್ದಿ ಹುಳುವನ್ನು ಗಮನಿಸಿ ನಾಳೆ ಕೀಟನಾಶಕ ಸಿಂಪಡಣೆ ಮಾಡೋಣ ಎಂದುಕೊಂಡರೆ ನಾಳೆ ಬಂದು ನೋಡುವಷ್ಟರಲ್ಲಿ ಅಷ್ಟೂ ಸುಳಿಯನ್ನು ಹುಳುಗಳು ತಿಂದು ಮುಗಿಸಿರುತ್ತವೆ. ಮೆಕ್ಕೆಜೋಳದ ಸುಳಿಯಲ್ಲಿ ಆಶ್ರಯ ಪಡೆಯುವುದರಿಂದ ಇದು ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ನಿರಂತರವಾಗಿ ಮಳೆ ಬಂದರೆ ಸುಳಿಯಲ್ಲಿ ನೀರು ನಿಲ್ಲುವುದರಿಂದ ಲದ್ದಿ ಹುಳು ಇಲ್ಲವೇ ಅದರ ಮೊಟ್ಟೆಗಳಿಗೆ ಆಶ್ರಯ ಸಿಗುವುದಿಲ್ಲ. ಆಗ ಮೆಕ್ಕೆಜೋಳ ಸುರಕ್ಷಿತವಾಗಿರುತ್ತದೆ. ಒಮ್ಮೆ ಲದ್ದಿಹುಳು ಕಾಣಿಸಿಕೊಂಡ ಬಳಿಕ ಕೀಟನಾಶಕ ಸಿಂಪಡಿಸಿದರೂ ಶೇ.100ರಷ್ಟು ಹುಳುಗಳು ನಾಶವಾಗುತ್ತವೆ ಎಂದು ನಿಶ್ಚಿತವಾಗಿ ಹೇಳುವಂತಿಲ್ಲ ಎನ್ನುತ್ತಾರೆ ಬೆಳೆಗಾರರು.
ಸಾವಯವ ಗೊಬ್ಬರ ಸೇಫ್
ಆಯನೂರಿನ ರೈತ ವೆಂಕಟೇಶ್ ಒಟ್ಟು ಮೂರು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಇದರಲ್ಲಿ ಸುಮಾರು ಐದು ಕೆ.ಜಿ ಬೀಜ ಬಿತ್ತನೆ ಮಾಡಿದ ಜಾಗದಲ್ಲಿ ಸಾವಯವ ಗೊಬ್ಬರ ಬಳಸಿದ್ದಾರೆ. ಉಳಿದ ಭೂಮಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡಿದ್ದಾರೆ. ಆಶ್ಚರ್ಯವೆಂದರೆ ಸಾವಯವ ಗೊಬ್ಬರ ಬಳಸಿದ ಭೂಮಿಗೆ ಲದ್ದಿ ಹುಳು ಕಾಟ ತೀರಾ ಕಡಿಮೆಯಿದೆ. ರಾಸಾಯನಿಕ ಬಳಸಿದ ಭೂಮಿಯಲ್ಲಿ ಹುಳುವಿನ ಬಾಧೆ ಹೆಚ್ಚಿದೆ.
"
ನಾನು ಜೂ.5ರಂದು ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಈಗ 24 ದಿನಗಳ ಸಸಿಗಳು ಕೇವಲ 8-10 ದಿನದ ಸಸಿಗಳಂತೆ ಬೆಳೆದಿವೆ. ಲದ್ದಿ ಹುಳುಗಳು ಮೆಕ್ಕೆಜೋಳದ ಸುಳಿಯನ್ನೇ ತಿನ್ನುವುದರಿಂದ ಗಿಡ ಎತ್ತರ ಬೆಳೆಯುವುದಿಲ್ಲ. ನಿರಂತರವಾಗಿ ಮಳೆ ಬಂದರೆ ಮಾತ್ರ ಈಗಿರುವ ಸ್ಥಿತಿಯಲ್ಲಾದರೂ ಗಿಡಗಳನ್ನು ಉಳಿಸಿಕೊಳ್ಳಬಹುದು. ಇಲ್ಲವಾದರೆ ಸಂಪೂರ್ಣ ನಾಶವಾಗಲಿದೆ.