ರಾಜ್ಯದ ಯುವ ಪ್ರತಿಭೆಗಳಿಗೆ ಮಹಾರಾಜ ಟ್ರೋಫಿ ಉತ್ತಮ ಅವಕಾಶ I maharaja trophy

ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಶಿವಮೊಗ್ಗ ಯೋಧಾಸ್ ತಂಡದ ಜೆರ್ಸಿಯನ್ನು ಬಿ.ವೈ.ರಾಘವೇಂದ್ರ ಅನಾವರಣಗೊಳಿಸಿದರು. ಡಿ.ಎಸ್.ಅರುಣ್, ವಿನಯ್ ಮೃತ್ಯುಂಜಯ, ದಿಗಂತ್, ಶಾಂತಾ ರಂಗಸ್ವಾಮಿ ಇತರರಿದ್ದರು.
ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಶಿವಮೊಗ್ಗ ಯೋಧಾಸ್ ತಂಡದ ಜೆರ್ಸಿಯನ್ನು ಬಿ.ವೈ.ರಾಘವೇಂದ್ರ ಅನಾವರಣಗೊಳಿಸಿದರು. ಡಿ.ಎಸ್.ಅರುಣ್, ವಿನಯ್ ಮೃತ್ಯುಂಜಯ, ದಿಗಂತ್, ಶಾಂತಾ ರಂಗಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಮತ
  • ಶಿವಮೊಗ್ಗ ಯೋಧಾಸ್ ತಂಡದ ಜೆರ್ಸಿ ಅನಾವರಣ
ಶಿವಮೊಗ್ಗ: ಕೆಎಸ್‌ಸಿಎ (ksca) ಮಹಾರಾಜ (maharaja) ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ 5ನೇ ಆವೃತ್ತಿ ಕಲರವ ಗರಿಗೆದರಿದ್ದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳನ್ನು ಒಳಗೊಂಡ ಮಲೆನಾಡನ್ನು ಪ್ರತಿನಿಧಿಸುವ ಶಿವಮೊಗ್ಗ ಯೋಧಾಸ್ (yoddas) ತಂಡದ ಜೆರ್ಸಿಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅನಾವರಣಗೊಳಿಸಿದರು.
ಮಹಾರಾಜ ಟ್ರೋಫಿ ಟೂರ್ನಿ ಕರ್ನಾಟಕದ ಯುವ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯಾಗಿದ್ದು, ರಾಜ್ಯದ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಶಿವಮೊಗ್ಗ ಯೋಧಾಸ್ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಬಿ.ಕೆ.ರವಿ ಮಾತನಾಡಿ, ಶಿವಮೊಗ್ಗದ ನವುಲೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಮಾಡಲು ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಮಳೆ ಹೆಚ್ಚು ಸುರಿಯುವುದರಿಂದ ಮಳೆಗಾಲದಲ್ಲಿ ಕ್ರಿಕೆಟ್ ಅಭ್ಯಾಸ ಕಷ್ಟವಾಗುತ್ತಿದೆ ಎಂಬುದನ್ನು ಕೆಎಸ್‌ಸಿಎ ವಲಯ ಸಂಚಾಲಕ ಡಿ.ಎಸ್.ಅರುಣ್ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಹೀಗಾಗಿ ಒಳಾಂಗಣ ಕ್ರೀಡಾಂಗಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ವರ್ಷದೊಳಗೆ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ಅವಧಿಯ ಮಹಾರಾಜ ಟ್ರೋಫಿ ಟೂರ್ನಿ ಪಂದ್ಯಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗುವುದು. ಈ ಬಾರಿ ಮಹಾರಾಜ ಟ್ರೋಫಿಯಲ್ಲಿ ಮೂರು ಬದಲಾವಣೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ಕ್ರಿಕೆಟ್ ಚಟುವಟಿಕೆಯನ್ನು ಕೊಂಡೊಯ್ಯಲಾಗುತ್ತದೆ ಎಂದರು.
ಶಿವಮೊಗ್ಗ ಯೋಧಾಸ್ ತಂಡದ ರಾಯಭಾರಿ, ನಟ ದಿಗಂತ್, ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ, ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮಾಜಿ ಸದಸ್ಯೆ ಶಾಂತಾ ರಂಗಸ್ವಾಮಿ, ಶಿವಮೊಗ್ಗ ಯೋಧಾಸ್ ತಂಡದ ಮಾಲೀಕ ಮಿಥುನ್‌ಕುಮಾರ್, ಅಭಿಷೇಕ್ ಅಗರವಾಲ್, ಸಮಿತಿ ಸದಸ್ಯೆ ಕಲ್ಪನಾ ವೆಂಕಟಾಚಾರ್, ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್, ಉದ್ಯಮಿ ಬಿ.ಆರ್.ಸುಭಾಷ್ ಇತರರಿದ್ದರು.
ಮೈಸೂರಿನಲ್ಲಿ ಚಾಲನೆ
ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ಜೂ.20ರಂದು ಮೈಸೂರಿನಲ್ಲಿ ಆರಂಭವಾಗಲಿದೆ. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಟೂರ್ನಿಗೆ ಚಾಲನೆ ನೀಡುವರು. ಮೈಸೂರು, ಹುಬ್ಬಳ್ಳಿಯಲ್ಲಿ ತಲಾ 12 ಹಾಗೂ ಬೆಂಗಳೂರಿನಲ್ಲಿ 10 ಸೇರಿ ಒಟ್ಟು 34 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಿಗದಿಯಾಗಿದೆ. ಮುಂದಿನ ಆವೃತ್ತಿಯಲ್ಲಿ ಶಿವಮೊಗ್ಗದಲ್ಲೂ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶಪ್ರಸಾದ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ರಾಹುಲ್ ದ್ರಾವಿಡ್ ಅವರನ್ನೊಳಗೊಂಡ ಸಮಿತಿ ಮಹಾರಾಜ ಟ್ರೋಫಿಯಲ್ಲಿ ಆಡಲಿರುವ ಆಟಗಾರರ ಪಟ್ಟಿ ಸಿದ್ಧಪಡಿಸಿತ್ತು. ಪಂದ್ಯಗಳು ಸೋನಿ ಎಚ್‌ಡಿ ವಾಹಿನಿಯಲ್ಲಿ ನೇರ ಪ್ರಸಾರವಾಗಲಿವೆ. ಕನ್ನಡದಲ್ಲಿ ವೀಕ್ಷಕ ವಿವರಣೆ ಇರಲಿದೆ ಎಂದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net