ಸಾಗರ ಉಪವಿಭಾಗೀಯ ಆಸ್ಪತ್ರೆ ಆವರಣದಲ್ಲಿ ಲಯನ್ಸ್ ಕ್ಲಬ್ ಕೊಡುಗಡೆಯಾಗಿ ನೀಡಿದ ಪ್ಲಾಸ್ಟಿಕ್ ಬಾಟಲ್ ಸಂಗ್ರಹ ಘಟಕವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿದರು. ಡಾ. ಟಿ.ಪ್ರಸನ್ನ, ಅಶ್ವಿನಿಕುಮಾರ್, ಮಧುಮಾಲತಿ ಇತರರಿದ್ದರು.
ಸಾಗರ: ಲಯನ್ಸ್ ಸಂಸ್ಥೆಯ ಜನೋಪಯೋಗಿ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಂಘ ಸಂಸ್ಥೆಗಳ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಉಪವಿಭಾಗೀಯ ಆಸ್ಪತ್ರೆ ಆವರಣದಲ್ಲಿ ಲಯನ್ಸ್ ಕ್ಲಬ್‌ನಿಂದ ಪ್ಲಾಸ್ಟಿಕ್ ಬಾಟಲ್ ಸಂಗ್ರಹ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ಬಾಟಲ್ ಬಳಕೆಯಿಂದ ಪರಿಸರ ಮಾಲಿನ್ಯ ಆಗುತ್ತಿದ್ದು, ಪ್ಲಾಸ್ಟಿಕ್ ಪರಿಸರಕ್ಕೆ ಅತ್ಯಂತ ಮಾರಕವಾಗಿದೆ. ಪ್ಲಾಸ್ಟಿಕ್ ಮುಕ್ತ ಪರಿಸರ ರೂಪಿಸುವ ಲಯನ್ಸ್ ಕಾರ್ಯಕ್ರಮ ಅತ್ಯಂತ ಗಮನಾರ್ಹವಾದುದು ಎಂದು ತಿಳಿಸಿದರು.
ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಆಸ್ಪತ್ರೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಎಸೆಯಲು ಇಂತಹ ಘಟಕ ಬಳಸಿಕೊಳ್ಳಬೇಕು ಎಂದರು.
ಲಯನ್ಸ್ ಸಂಸ್ಥೆಯ ಅಶ್ವಿನಿಕುಮಾರ್ ಮಾತನಾಡಿ, ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆ. ನೀರು ಕುಡಿದು ಪ್ಲಾಸ್ಟಿಕ್ ಬಾಟಲ್ ಎಲ್ಲೆಂದರಲ್ಲಿ ಎಸೆಯುವ ಸಂಸ್ಕೃತಿಗೆ ತೀಲಾಂಜಲಿ ಇಡಬೇಕು. ಪ್ಲಾಸ್ಟಿಕ್ ಬಾಟಲ್ ಸಂಗ್ರಹ ಘಟಕವನ್ನು ಆಯಕಟ್ಟಿನ ಸ್ಥಳಗಳಲ್ಲಿ ಇಡಲಾಗುತ್ತಿದೆ. ಈ ವರ್ಷ ಲಯನ್ಸ್ ಸಂಸ್ಥೆ 50 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಸಾಮಾಜಿಕ ಸೇವೆ ಕೈಗೊಂಡಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಸಾಗರ ಅಧ್ಯಕ್ಷ ಡಾ. ಟಿ.ಪ್ರಸನ್ನ, ಪ್ರಮುಖರಾದ ಟಿ.ವಿ.ಪಾಂಡುರಂಗ, ಇ.ನಾಗರಾಜ್, ಸುರೇಶ್, ಅಶೋಕ್ ಬೇಳೂರು, ಗಣಪತಿ ಮಂಡಗಳಲೆ, ಮಧುಮಾಲತಿ ಇತರರಿದ್ದರು.