ಹೊಸನಗರ: ತಾಲೂಕಿನ ಮೂಲೆಗದ್ದೆ ಮಠದಲ್ಲಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ತೆಪ್ಪೋತ್ಸವ, ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ಜರುಗಿತು.
ಹಾರನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ ಮಾತನಾಡಿ, ಅಜ್ಞಾನದಿಂದ ಸುಜ್ಞಾನದ ಕಡೆಗೆ ದಾರಿ ತೋರುವ ನಿಟ್ಟಿನಲ್ಲಿ ಕಾರ್ತಿಕ ದೀಪೋತ್ಸವ ಮಹತ್ವ ಪಡೆದುಕೊಂಡಿದೆ. ಮನುಕುಲದಲ್ಲಿ ಆವರಿಸಿದ ಅಂಧಕಾರವನ್ನು ಹೋಗಲಾಡಿಸಲು ದೀಪ ಬೆಳಗಬೇಕು. ಬೆಳಕು ಎಂದರೆ ಕೇವಲ ದೀಪವಲ್ಲ, ಅದೊಂದು ಅದೊಂದು ಜ್ಞಾನ. ಜ್ಞಾನದ ಶಕ್ತಿಯಿಂದ ಅಜ್ಞಾನವನ್ನು ಹೋಗಲಾಡಿಸಬೇಕಿದೆ ಎಂದರು.
ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಜ್ಞಾನ, ದೂರದೃಷ್ಟಿ, ಸಮಷ್ಠಿ ಭಾವದ ಫಲವಾಗಿ ಮೂಲೆಗದ್ದೆ ಮಠ ಬೆಳಗುತ್ತಿದೆ. ಇಲ್ಲಿ ಸಹಸ್ರಾರು ಭಕ್ತರು ಒಂದೇ ಮನಸ್ಸಿನಿಂದ ಪಾಲ್ಗೊಂಡು ಆಚರಿಸುತ್ತಿರುವ ಕಾರ್ತಿಕ ದೀಪೋತ್ಸವವೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಸದಾನಂದ ಚರಿತಾಮೃತ: ಬಾರಂಗಿ ಕೂಡಲಿಯಿಂದ ಮೂಲಗದ್ದೆ ಮಠದವರೆಗೆ ಅಂದರೆ 16ನೇ ಶತಮಾನದಿಂದ ಈವರೆಗೆ ನಡೆದ ಘಟನಾವಳಿಗಳ ಸಂಗಮದಲ್ಲಿ ಗಾರ್ಗಿ ಕಾರೇಹಕ್ಕಲು ರಚನೆ ನಿರ್ದೇಶನ, ಅಜಯಕುಮಾರ್ ಶರ್ಮಾ ಅವರಿಂದ ಇತಿಹಾಸದ ಸಲಹೆ, ಸಾರಾ ಅವರ ಸಹಕಾರದಲ್ಲಿ ಮೂಡಿ ಬರುತ್ತಿರುವ ಸದಾನಂದ ಚರಿತಾಮೃತ ಸಾಕ್ಷೃಚಿತ್ರದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಸಂಕ್ರಾತಿ ಕಾರ್ಯಕ್ರಮದಲ್ಲಿ ಸಾಕ್ಷೃಚಿತ್ರ ಬಿಡುಗಡೆಯಾಗಲಿದೆ ಎಂದು ಮೂಲೆಗದ್ದೆ ಶ್ರೀಗಳು ತಿಳಿಸಿದರು.ಮೂಲೆಗದ್ದೆ ಮಠದ ಹಿನ್ನೀರಲ್ಲಿ ತೆಪ್ಪೋತ್ಸವ, ಗುರುಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಸಿಡಿಮದ್ದು ಪ್ರದರ್ಶಿಸಿ ಸಂಭ್ರಮಿಸಿದರು. ದೀಪೋತ್ಸವ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸುವರ್ಧಿನಿ ನೃತ್ಯಶಾಲೆ ಕೇಂದ್ರದ ಮಕ್ಕಳು ಭರತನಾಟ್ಯ ಪ್ರದರ್ಶಿಸಿದರು.
ಪ್ರಮುಖರಾದ ಹಾಲಪ್ಪ ಗೌಡ, ಬಿ.ಯುವರಾಜ, ವಿನಯಕುಮಾರ್, ಈಶ್ವರಪ್ಪ ಗೌಡ, ಜಿ.ಟಿ.ಈಶ್ವರ ಗೌಡ, ಬಿ.ಜಿ.ನಾಗರಾಜ್, ಅಶ್ವಿನಿಕುಮಾರ್, ಕಾಶಿ, ಕೊಗಟಿ ರಾಜಶೇಖರ್, ಮಹೇಂದ್ರ, ಓಂಕೇಶ್, ರಾಜೇಂದ್ರ, ಸುಧೀಂದ್ರ ಪಂಡಿತ್, ವಿದುಷಿ ಶ್ವೇತಾ ವಿಷ್ಣು ಜೋಯಿಸ್, ಸಾರಾ, ಗುರು ವಿಕ್ರಮ ಮತ್ತಿತರರು ಇದ್ದರು.