ಗ್ರಂಥಾಲಯಗಳು ಜ್ಞಾನ ಪ್ರಸಾರದ ಕೇಂದ್ರಗಳು | Librarians' Day Celebration

ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಗ್ರಂಥಾಲಯ ದಿನಾಚರಣೆಯಲ್ಲಿ ಅತ್ಯುತ್ತಮ ಗ್ರಂಥಾಲಯ ಬಳಕೆದಾರರನ್ನು ಗೌರವಿಸಲಾಯಿತು. ಪ್ರೊ. ವೈ.ಎ.ಸುರೇಶ್, ಡಾ. ಆರ್.ಕುಮಾರಸ್ವಾಮಿ, ಡಾ. ಎಂ.ನಾಗರಾಜು, ಡಾ. ಕೆ.ಆರ್.ಪೃಥ್ವಿರಾಜ್ ಇತರರಿದ್ದರು.
ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಗ್ರಂಥಾಲಯ ದಿನಾಚರಣೆಯಲ್ಲಿ ಅತ್ಯುತ್ತಮ ಗ್ರಂಥಾಲಯ ಬಳಕೆದಾರರನ್ನು ಗೌರವಿಸಲಾಯಿತು. ಪ್ರೊ. ವೈ.ಎ.ಸುರೇಶ್, ಡಾ. ಆರ್.ಕುಮಾರಸ್ವಾಮಿ, ಡಾ. ಎಂ.ನಾಗರಾಜು, ಡಾ. ಕೆ.ಆರ್.ಪೃಥ್ವಿರಾಜ್ ಇತರರಿದ್ದರು.
Published on
ತೀರ್ಥಹಳ್ಳಿ: ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ. ಅವು ಜ್ಞಾನ ಪ್ರಸಾರ ಮತ್ತು ವ್ಯಕ್ತಿತ್ವ ವಿಕಸನದ ಕೇಂದ್ರಗಳು ಎಂದು ಬಾಳೆಹೊನ್ನೂರಿನ ಬಿಜಿಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ವೈ.ಎ.ಸುರೇಶ್ ಹೇಳಿದರು.
ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆಯನ್ನೂ ಕೂಡ ಒಂದು ಗ್ರಂಥಾಲಯವನ್ನಾಗಿ ಮಾಡಿಕೊಂಡು, ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಮನುಷ್ಯನ ಜ್ಞಾನವನ್ನು ವಿಸ್ತರಿಸುವುದರ ಜತೆಗೆ ಸಮಾಜದಲ್ಲಿ ಸಂಸ್ಕಾರವಂತರಾಗಿ ಬದುಕಲು ಮಾರ್ಗದರ್ಶನ ನೀಡುತ್ತವೆ. ಗ್ರಂಥಾಲಯಗಳು ಜ್ಞಾನಸಾಗರವಾದರೆ, ಗ್ರಂಥಪಾಲಕರು ವಿದ್ಯಾರ್ಥಿಗಳಿಗೆ ದಾರಿದೀಪಗಳಂತೆ ಮಾರ್ಗದರ್ಶನ ನೀಡುವವರು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಕಲಿಕೆಯ ಪ್ರಕ್ರಿಯೆಯಲ್ಲಿ ಪುಸ್ತಕಗಳನ್ನು ತಮ್ಮ ನಿತ್ಯದ ಸಂಗಾತಿಗಳನ್ನಾಗಿ ಮಾಡಿಕೊಳ್ಳಬೇಕು. ಓದುವ ಅಭ್ಯಾಸವು ವಿದ್ಯಾರ್ಥಿಗಳ ಜ್ಞಾನ, ಚಿಂತನಾ ಶಕ್ತಿ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವರ್ಷದ ಅತ್ಯುತ್ತಮ ಗ್ರಂಥಾಲಯ ಬಳಕೆದಾರರನ್ನು ಗುರುತಿಸಿ ಗೌರವಿಸಲಾಯಿತು.
ಐಕ್ಯೂಎಸಿ ಸಂಚಾಲಕ ಡಾ. ಎಂ.ನಾಗರಾಜು, ಗ್ರಂಥಪಾಲಕ ಡಾ. ಕೆ.ಆರ್.ಪೃಥ್ವಿರಾಜ್, ನಿವೃತ್ತ ಗ್ರಂಥಪಾಲಕ ನಾರಾಯಣಮೂರ್ತಿ, ಸುಶ್ಮಿತಾ, ಪ್ರಜ್ಞಾ, ನಯನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net