ಗಣಪತಿಯಪ್ಪ ಜನ್ಮದಿನವನ್ನು ಸರ್ಕಾರವೇ ಆಚರಿಸಲಿ | Ganapatiyappa's birthday

ಸಾಗರ ತಾಲೂಕಿನ ವಡ್ನಾಲ ಗ್ರಾಮದ ಗಣಪತಿಯಪ್ಪ ಅವರ ಸ್ಮಾರಕದ ಬಳಿ ಆಯೋಜಿಸಿದ್ದ ಅವರ 102ನೇ ಜನ್ಮದಿನಾಚರಣೆಯಲ್ಲಿ ಜಿನೇಶ್‌ಕುಮಾರ್, ಡಾ. ರಾಜು, ಎಂ.ಬಿ.ಮಂಜಪ್ಪ, ಉಮೇಶ್, ಪರಮೇಶ್ವರ, ಜಯಲಕ್ಷ್ಮೀ ಇತರರಿದ್ದರು.
ಸಾಗರ ತಾಲೂಕಿನ ವಡ್ನಾಲ ಗ್ರಾಮದ ಗಣಪತಿಯಪ್ಪ ಅವರ ಸ್ಮಾರಕದ ಬಳಿ ಆಯೋಜಿಸಿದ್ದ ಅವರ 102ನೇ ಜನ್ಮದಿನಾಚರಣೆಯಲ್ಲಿ ಜಿನೇಶ್‌ಕುಮಾರ್, ಡಾ. ರಾಜು, ಎಂ.ಬಿ.ಮಂಜಪ್ಪ, ಉಮೇಶ್, ಪರಮೇಶ್ವರ, ಜಯಲಕ್ಷ್ಮೀ ಇತರರಿದ್ದರು.
Published on
ಸಾಗರ: ಕಾಗೋಡು ಸತ್ಯಾಗ್ರಹದ ಮೂಲಕ ಗೇಣಿ ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಎಚ್.ಗಣಪತಿಯಪ್ಪ ಅವರ ಜನ್ಮದಿನವನ್ನು ರಾಜ್ಯ ಸರ್ಕಾರದಿಂದಲೇ ಆಚರಿಸಬೇಕು ಎಂದು ಸಂಯುಕ್ತ ರೈತ ಸಂಘದ ಗೌರವಾಧ್ಯಕ್ಷ ಜಿನೇಶ್‌ಕುಮಾರ್ ಮನವಿ ಮಾಡಿದರು.
ತಾಲೂಕಿನ ವಡ್ನಾಲ ಗ್ರಾಮದ ಗಣಪತಿಯಪ್ಪ ಅವರ ಸ್ಮಾರಕದ ಬಳಿ ಸೋಮವಾರ ತಾಲೂಕು ಸಂಯುಕ್ತ ರೈತ ಸಂಘದಿಂದ ಹಮ್ಮಿಕೊಂಡಿದ್ದ ಎಚ್.ಗಣಪತಿಯಪ್ಪ ಅವರ 102ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಚಳವಳಿ, ಕಾಗೋಡು ಸತ್ಯಾಗ್ರಹದಲ್ಲಿ ಪಾಲ್ಗೊಂಡ ಗಣಪತಿಯಪ್ಪ ಅವರ ಹೋರಾಟದ ಹಾದಿ ಯುವಜನರಿಗೆ ಸ್ಫೂರ್ತಿದಾಯಕ. 1951ರಲ್ಲಿ ಕಾಗೋಡು ಚಳವಳಿ ಸಂದರ್ಭದಲ್ಲಿ ಗಣಪತಿಯಪ್ಪ ಅವರ ಸಮರ್ಥ ನಾಯಕತ್ವದಿಂದಲೇ ಗೇಣಿ ರೈತರು ತಾವು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಪಡೆದು ಜಮೀನ್ದಾರರ ದಾಸ್ಯದಿಂದ ಹೊರಗೆ ಬರಲು ಸಾಧ್ಯವಾಯಿತು. ಹಿಂದುಳಿದವರ ಸ್ವಾಭಿಮಾನವನ್ನು ಕಾಪಾಡಿದ ಗಣಪತಿಯಪ್ಪ ಅವರ ಜನ್ಮದಿನವನ್ನು ಸರ್ಕಾರದಿಂದ ಆಚರಿಸುವ ಜತೆಗೆ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹೊಯ್ಸಳ ಗಣಪತಿಯಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟ, ಕಾಗೋಡು ಚಳವಳಿ, ನಂತರದಲ್ಲಿ ನಡೆದ ಅನೇಕ ಭೂಹೀನರ ಪ್ರತಿಭಟನೆ, ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಗಣಪತಿಯಪ್ಪ ಬದುಕಿದವರು. ಬಹಿಷ್ಕಾರದಂತಹ ಪದ್ಧತಿ ವಿರುದ್ಧ ಅವರು ನಡೆಸಿದ ಉಪವಾಸ ಸತ್ಯಾಗ್ರಹ ಗಮನಾರ್ಹವಾಗಿತ್ತು. ಅವರ ಹೋರಾಟದ ಹಾದಿ ಕುರಿತು ಪಠ್ಯದಲ್ಲಿ ದಾಖಲಿಸುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು, ಉಮೇಶ್ ಹಿರೇನೆಲ್ಲೂರು, ದಲಿತ ಮುಖಂಡ ಪರಮೇಶ್ವರ ದೂಗೂರು, ದೇವು ಆಲಳ್ಳಿ, ರಮೇಶ್ ಐಗಿನಬೈಲು, ಕಿರಣ್ ವಡ್ನಾಲ, ಜಯಲಕ್ಷ್ಮೀ ನೇದರವಳ್ಳಿ, ಮಂಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net