ವಿಕಲಾಂಗರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ

ಸೊರಬದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರು, ಹಿರಿಯ ನಾಗರಿಕರಿಗೆ ಕೇಂದ್ರಿಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ರಾಹುಲ್ ಎನ್. ಗಾಯಕ್‌ವಾಡ್ ಉಪಕರಣಗಳನ್ನು ವಿತರಿಸಿದರು. ಸುವರ್ಣಾ ನಾಯಕ್, ಅಕ್ಷಯ್ ವಂಜಾರಿ, ಎಚ್.ಕೆ.ಜಯಶೀಲ ಗೌಡ ಇತರರಿದ್ದರು.
ಸೊರಬದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರು, ಹಿರಿಯ ನಾಗರಿಕರಿಗೆ ಕೇಂದ್ರಿಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ರಾಹುಲ್ ಎನ್. ಗಾಯಕ್‌ವಾಡ್ ಉಪಕರಣಗಳನ್ನು ವಿತರಿಸಿದರು. ಸುವರ್ಣಾ ನಾಯಕ್, ಅಕ್ಷಯ್ ವಂಜಾರಿ, ಎಚ್.ಕೆ.ಜಯಶೀಲ ಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಕೆ.ಜಿ.ಶಶಿಧರ್ ಸಲಹೆ
  • 22 ಜನರಿಗೆ ಉಪಕರಣ ವಿತರಣೆ
ಸೊರಬ: ಅಂಗವೈಕಲ್ಯದಿಂದ ಬಳಲುತ್ತಿರುವವರು ಧೈರ್ಯದಿಂದ ಜೀವನ ಮುನ್ನಡೆಸಬೇಕು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ಇಒ ಕೆ.ಜಿ.ಶಶಿಧರ್ ಹೇಳಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಕೇಂದ್ರಿಯ ಉಗ್ರಾಣ ನಿಗಮದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಉಪಕರಣಗಳನ್ನು ವಿತರಿಸಿ ಮಾತನಾಡಿದರು.
ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳ ಅಡಿ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿವಿಧ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಕೈಜೋಡಿಸುವ ಮೂಲಕ ಅಂಗವಿಕಲರ ಬಾಳಿಗೆ ಬೆಳಕಾಗಿವೆ. ಅಂಗವೈಕಲ್ಯ ಎದುರಿಸುತ್ತಿರುವ ಅನೇಕರು ಕ್ರೀಡೆ, ಸಂಗೀತ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಸುವರ್ಣಾ ವಿ. ನಾಯಕ್ ಮಾತನಾಡಿ, ಕೇಂದ್ರಿಯ ಉಗ್ರಾಣ ನಿಗಮದ ಸಾಮಾಜಿಕ ಕಳಕಳಿಯಿಂದ ಅಂಗವಿಕಲರ ಬದುಕು ಉತ್ತಮಗೊಳಿಸಲು ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ನಿತ್ಯ ಬಳಕೆಯಾಗುವ ಸೂಕ್ತ ಸಾಧನಗಳನ್ನು ನೀಡುತ್ತಿದೆ. ಸೊರಬ ತಾಲೂಕಿನ ಅಂಗವಿಕಲರಿಗೆ 25 ಲಕ್ಷ ರೂ. ಮೌಲ್ಯದ ಸಾಧನಗಳನ್ನು ವಿತರಿಸಿದೆ. ಜಿಲ್ಲೆಯಲ್ಲಿ 21,784 ಅಂಗವಿಕಲರಿದ್ದು, ಸೊರಬ ತಾಲೂಕಿನಲ್ಲಿ 3,320 ವಿಕಲಾಂಗರಿದ್ದಾರೆ. ಇದರಲ್ಲಿ ಆಯ್ದ 22 ಜನರಿಗೆ ವಿವಿಧ ಸಾಧನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಕೆ.ಜಯಶೀಲ ಗೌಡ ಮಾತನಾಡಿ, ಅಂಗವಿಕಲರ ಬದುಕಿಗೆ ಬೇಕಾಗುವ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಿದರು.
ಕೇಂದ್ರೀಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ರಾಹುಲ್ ಎನ್. ಗಾಯಕ್‌ವಾಡ್ ವಿವಿಧ ಸಾಧನ ಉಪಕರಣ ವಿತರಿಸಿದರು. ನಿಗಮದ ಹಿರಿಯ ವ್ಯವಸ್ಥಾಪಕ ಅಕ್ಷಯ್ ವಂಜಾರಿ, ವ್ಯವಸ್ಥಾಪಕ ಎಸ್.ಎಚ್.ಪ್ರಮೋದ್, ಶಿವಕುಮಾರ, ಪ್ರಭಾಕರ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಅಂಜಲಿ ಸಂಜೀವ, ರಾಮಪ್ಪ, ಭರತ್, ರವೀಂದ್ರ, ಕುಮಾರಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net