ಹೊಂಬುಜದಲ್ಲಿಯೇ ಪಂಪ ಪ್ರಶಸ್ತಿ ವಿತರಿಸಲಿ | Award Function
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಬೆಳಗಾವಿಯ ಪ್ರೊ. ಶಾಂತಿನಾಥ ದಿಬ್ಬದ ಅವರಿಗೆ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ಹೊಂಬುಜ ಶ್ರೀಗಳು ಪ್ರದಾನ ಮಾಡಿದರು. ಕೆ.ಎಸ್.ಈಶ್ವರಪ್ಪ, ವಿಜಯ್ ಪಾಟ್ನಿ, ರವಿರಾಜ್ ಜೈನ್ ಇತರರಿದ್ದರು.
Published on:
Copied
Follow Us
ರಿಪ್ಪನ್‌ಪೇಟೆ: ಚಾರಿತ್ರಿಕ ಮಹತ್ವ ಹೊಂದಿರುವ ಹೊಂಬುಜ ಜೈನ ಮಠವು, ಮಹಾಕವಿ ಪಂಪರ ಶೈಕ್ಷಣಿಕ ಪೀಠವಾಗಿತ್ತು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಆದ್ದರಿಂದ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಕೊಡುವ ಪಂಪ ಪ್ರಶಸ್ತಿಯನ್ನು ಆದಿ ಕವಿಯ ಸಾಹಿತ್ಯ ಕರ್ಮ ಭೂಮಿ ಹೊಂಬುಜದಲ್ಲಿಯೇ ವಿತರಿಸಲಿ ಎಂದು ಸಿದ್ಧಾಂತ ಕೀರ್ತಿ ಪ್ರಶಸ್ತಿ ಪುರಸ್ಕೃತ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಬೆಳಗಾವಿಯ ಪ್ರೊ. ಶಾಂತಿನಾಥ ದಿಬ್ಬದ ಹೇಳಿದರು.
ಹೊಂಬುಜ ಜೈನ ಮಠದ ವಾರ್ಷಿಕ ರಥಯಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಬುಧವಾರ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ‘ಸಿದ್ಧಾಂತ ಕೀರ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕವಿ ಪಂಪ ಅವರ ವಿದ್ಯಾನೆಲೆಯಲ್ಲಿ ಪ್ರಶಸ್ತಿ ಪಡೆದಿರುವುದು ಸಂತೋಷವಾಗಿದೆ. 5-6ನೇ ಶತಮಾನದಲ್ಲಿ ಸಾಂತರ ದೊರೆ ಜಿನದತ್ತರಾಯರಿಂದ ಸ್ಥಾಪಿತವಾದ ಸಾಮ್ರಾಜ್ಯದಲ್ಲಿ ಹೊಂಬುಜ ಪ್ರಮುಖ ಜೈನ ಗುರು ಪೀಠವಾಗಿತ್ತು. 23ನೇ ತೀರ್ಥಂಕರರಾದ ಪಾರ್ಶ್ವನಾಥ ಮತ್ತು ಯಕ್ಷಿ ಪದ್ಮಾವತಿ ದೇವಿ ನೆಲೆವೀಡಾಗಿತ್ತು. 10ನೇ ಶತಮಾನದಲ್ಲಿ ಕನ್ನಡದ ಆದಿಕವಿಯಾಗಿ ಮೆರೆದ ಪಂಪ ಆ ದಿನಗಳಲ್ಲಿ ಶಿಕ್ಷಣ ಪಡೆದಿರುವುದು ಇದೇ ಹೊಂಬುಜ ಜೈನ ಮಠದಲ್ಲಿ ಎಂಬುದು ನನ್ನ ಅಭಿಪ್ರಾಯ ಎಂದರು.
ಹೊಂಬುಜ ಪೀಠದ ಭಟ್ಟಾರಕ ಪಟ್ಟಾವಳಿ ಮತ್ತು ಪಂಪನು ತನ್ನ ಆದಿಪುರಾಣ ಕೃತಿಯಲ್ಲಿ ತಿಳಿಸಿರುವ ಗುರುಪರಂಪರೆಯ ವಿವರ ಇವೆರಡೂ ಒಂದೇ ಆಗಿದೆ ಎಂಬುದೇ ಇದಕ್ಕೆ ಮುಖ್ಯ ಸಾಕ್ಷಿ. ಅಂದಿನ ಪ್ರಮುಖ ಗುರುಗಳಾಗಿದ್ದ ದೇವೇಂದ್ರ ಮುನೀಂದ್ರರು ಹಾಗೂ ಶ್ರೀಮಠದಲ್ಲಿದ್ದ ಮಲಧಾರಿ ಸಿದ್ಧಾಂತ ಮುನಿ ಮತ್ತು ಜಯನಂದಿ ಮುನಿಗಳು ತನ್ನ ವಿದ್ಯಾಗುರುಗಳು ಎಂದು ಪಂಪಕವಿ ತಿಳಿಸಿದ್ದಾನೆ. ಪ್ರಸ್ತುತ ಮಠವು ಕೊಂಡ ಕುಂದ ಅನ್ವಯಕ್ಕೆ ಸೇರಿದ್ದು, ಪಂಪ ಓದಿದ್ದು ಕೂಡಾ ಕೊಂಡ ಕೊಂದ ಅನ್ವಯಕ್ಕೆ ಸೇರಿದ್ದು ಎಂಬುದು ಇದಕ್ಕೆ ಇನ್ನೊಂದು ಸಾಕ್ಷಿ ಎಂದು ತಿಳಿಸಿದರು.
ಅನೇಕ ಅಧ್ಯಯನಗಳಿಂದ ಪಂಪನು ಓದಿದ್ದು ಹೊಂಬುಜದಲ್ಲೇ ಎಂಬುದನ್ನು ಆಧಾರಸಹಿತ ದೃಢಪಡಿಸಲು ನಾನು ಪ್ರಯತ್ನಿಸಿದ್ದೇನೆ. ವಿಷಯದ ಬಗ್ಗೆ ನಾಡಿನ ವಿದ್ವಾಂಸರು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ನಾನು ಈ ಮೂಲಕ ವಿನಂತಿಸುತ್ತಿದ್ದೇನೆ. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರವು ಪಂಪ ಕವಿಯ ಸಾಹಿತ್ಯಕ್ಕೆ ಪ್ರೇರಣೆಯಾದ ಹೊಂಬುಜದಲ್ಲಿಯೇ ಇನ್ನು ಮುಂದೆ ಸರ್ಕಾರ ಪಂಪ ಪ್ರಶಸ್ತಿಯನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಉದ್ಯಮಿ ವಿಜಯ್ ಪಾಟ್ನಿ, ರವಿರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಅಶೋಕ್‌ಕುಮಾರ್, ಯಶೋಧರ ಇಂದ್ರ, ಸಂತೋಷ್‌ಕುಮಾರ್ ಇತರರಿದ್ದರು.