ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಿ | pressmeet

ಗುರುಕುಮಾರ್ ಪಾಟೀಲ್
ಗುರುಕುಮಾರ್ ಪಾಟೀಲ್
Published on
ಸೊರಬ: ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಜಿಪಂ ಹಾಗೂ ತಾಪಂ ಚುನಾವಣೆ ನಡೆಸದೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕುಂಠಿತವಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಹೋರಾಟ ನಡೆಸಲು ಕರ್ನಾಟಕ ಸ್ಥಳೀಯ ಜನಪ್ರತಿನಿಧಿಗಳ ಹಕ್ಕೊತ್ತಾಯ ಸೇವಾ ಸಮಿತಿ ಶೀಘ್ರ ಅಸ್ತಿತ್ವಕ್ಕೆ ಬರಲಿದೆ ಎಂದು ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್ ಹೇಳಿದರು.
ಅಧಿಕಾರ ವಿಕೇಂದ್ರೀಕರಣ ಉದ್ದೇಶದಿಂದ ಜಿಲ್ಲಾ, ತಾಲೂಕು ಮತ್ತು ಗ್ರಾಪಂಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ಸರ್ಕಾರಗಳು ಕಳೆದ 10 ವರ್ಷಗಳಿಂದ (ಎರಡು ಅವಧಿಗೆ) ಚುನಾವಣೆ ನಡೆಸದೆ ಜನತೆಗೆ ಅನ್ಯಾಯ ಮಾಡಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸ್ಥಳೀಯ ಚುನಾವಣೆಗಳಿಗೆ ಮೀಸಲಾತಿ ನೆಪ ಹೇಳಿ ಮುಂದೂಡಲಾಗುತ್ತಿದೆ. ಇದರಿಂದ ಎರಡು ಅವಧಿಗೆ ಸಾಮಾನ್ಯ ವ್ಯಕ್ತಿಗಳು ಆಡಳಿತ ನಡೆಸುವುದನ್ನು ತಪ್ಪಿಸಲಾಗಿದೆ. ಎಲ್ಲ ಪಕ್ಷಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಮನ್ನಣೆ ನೀಡುತ್ತಿಲ್ಲ. ಈಗಾಗಲೇ ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿಗಳ ನೇಮಕ ಮಾಡಲಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತಗೊಳ್ಳಲಿದೆ. ಹಾಗಾಗಿ ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಅಬ್ದುಲ್ ನಜೀರ್ ಸಾಬ್ ಹಾಕಿಕೊಟ್ಟ ಪಂಚಾಯತ್‌ರಾಜ್ ವ್ಯವಸ್ಥೆಗೆ ಬಲಬರುವ ರೀತಿ ಹೋರಾಟ ರೂಪಿಸಲಾಗುವುದು. ಈ ಹೋರಾಟವನ್ನು ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ವಿಸ್ತರಿಸಲು ಈಗಾಗಲೇ ವಿದ್ವಾಂಸರು ಹಾಗೂ ಚಿಂತಕರನ್ನು ಒಳಗೊಂಡ ಸಮಿತಿ ಅಸ್ತಿತ್ವಕ್ಕೆ ಬರಲಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳ ಸಿಬಿಲ್ ಸ್ಕೋರ್‌ನಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಇದನ್ನು ಕೈಬಿಟ್ಟು ಬ್ಯಾಂಕುಗಳು ಗ್ರಾಹಕನ ಉದ್ಯೋಗ, ವ್ಯವಹಾರ, ಆಸ್ತಿ, ಬಂಡವಾಳವನ್ನು ನೋಡಿ ಸಾಲ ಸೌಲಭ್ಯ ನೀಡಬೇಕು. ಸಹಕಾರ ಬ್ಯಾಂಕ್‌ಗಳಲ್ಲಿ ಸಿಬಿಲ್ ಸ್ಕೋರ್ ಇಲ್ಲದೆಯೇ ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ. ಸಿಬಿಲ್ ಸ್ಕೋರ್ ನೆಪದಲ್ಲಿ ಬಡವರಿಗೆ ಸಾಲ ಸೌಲಭ್ಯ ದೊರೆಯದಂತಾಗಿದೆ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net