ವಕೀಲರ ಹೋರಾಟ ನ್ಯಾಯಸಮ್ಮತ I lawyers protest

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿ ವಕೀಲರು ನಡೆಸುತ್ತಿರುವ ಮುಷ್ಕರದಲ್ಲಿ ಬಿ.ವೈ.ರಾಘವೇಂದ್ರ, ಕೆ.ಎಸ್.ಈಶ್ವರಪ್ಪ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಕೆ.ಇ.ಕಾಂತೇಶ್, ಇ.ವಿಶ್ವಾಸ್, ಕೆ.ಬಸಪ್ಪ ಗೌಡ, ರಾಘವೇಂದ್ರ ಸ್ವಾಮಿ ಇತರರಿದ್ದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿ ವಕೀಲರು ನಡೆಸುತ್ತಿರುವ ಮುಷ್ಕರದಲ್ಲಿ ಬಿ.ವೈ.ರಾಘವೇಂದ್ರ, ಕೆ.ಎಸ್.ಈಶ್ವರಪ್ಪ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಕೆ.ಇ.ಕಾಂತೇಶ್, ಇ.ವಿಶ್ವಾಸ್, ಕೆ.ಬಸಪ್ಪ ಗೌಡ, ರಾಘವೇಂದ್ರ ಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಲಿ
  • ಸಂಘ ಸಂಸ್ಥೆಗಳ ವ್ಯಾಪಕ ಬೆಂಬಲ
  • ರಾಜಕೀಯ ಪಕ್ಷಗಳ ಪ್ರಮುಖರೂ ಮುಷ್ಕರದಲ್ಲಿ ಭಾಗಿ
ಶಿವಮೊಗ್ಗ: ಹೈಕೋರ್ಟ್ (highcourt) ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿ ಆರಂಭಿಸಬೇಕೆಂಬ ವಕೀಲರ ಸಂಘದ ಬೇಡಿಕೆಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚುತ್ತಿದೆ. ರಾಜಕೀಯ (political) ಪಕ್ಷಗಳ ಪ್ರಮುಖರೂ ಈ ಹೋರಾಟದಲ್ಲಿ ಭಾಗಿಯಾಗಿ ನೈತಿಕ ಬೆಂಬಲ ತುಂಬುತ್ತಿದ್ದಾರೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ತಂಡ ಮುಷ್ಕರದಲ್ಲಿ ಭಾಗವಹಿಸಿ ಬೆಂಬಲಿಸಿದೆ.
ಇನ್ನೊಂದೆಡೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗವೂ ವಕೀಲರ ಬೆನ್ನಿಗೆ ನಿಂತಿದೆ. ವಕೀಲರು ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದ ಕೆ.ಎಸ್.ಈಶ್ವರಪ್ಪ ಹೋರಾಟಕ್ಕೆ ಬೆಂಬಲ ಸೂಚಿಸಿ, ಸರ್ಕಾರ ಯಾವ ಕಾರಣಕ್ಕೆ ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಗೆ ಒಲವು ತೋರುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು. ಇದು ರಾಜಕೀಯ ಹಿತಾಸಕ್ತಿಯ ಒತ್ತಾಯವಲ್ಲ. ಬದಲಿಗೆ ಮಲೆನಾಡಿನ ಜನರ ನ್ಯಾಯಸಮ್ಮತ ಹಕ್ಕು. ನಿಮ್ಮ ಸಂಸದನಾಗಿ ಕೇಂದ್ರ ಕಾನೂನು ಸಚಿವಾಲಯದ ಮಟ್ಟದಲ್ಲಿ ಈ ಪ್ರಸ್ತಾಪಕ್ಕೆ ಧ್ವನಿಯಾಗಲು ನಾನು ಬದ್ಧನಾಗಿದ್ದೇನೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ವಕೀಲರ ಮುಷ್ಕರವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಗತ್ಯ ಮೂಲ ಸೌಕರ್ಯ ಒದಗಿಸಿ, ಮುಖ್ಯ ನ್ಯಾಯಮೂರ್ತಿಗಳ ಸಹಮತಿಯೊಂದಿಗೆ ಕೇಂದ್ರಕ್ಕೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಬೇಕಿದೆ. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗುವವರೆಗೆ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಡೋಣ ಎಂದರು.
ಎಲ್ಲರಿಗೂ ಸುಲಭವಾಗಿ ನ್ಯಾಯ ಸಿಗಬೇಕು ಎನ್ನುವುದು ಸಂವಿಧಾನದ ಆಶಯ. ಆದರೆ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರು ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಧಾರವಾಡ ಮತ್ತು ಕಲಬುರಗಿ ಮಾದರಿಯಲ್ಲಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮಧ್ಯಬಿಂದುವಾಗಿರುವ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಭೌಗೋಳಿಕವಾಗಿ ಹಾಗೂ ನ್ಯಾಯದ ದೃಷ್ಟಿಯಿಂದ ಅಗತ್ಯ. ಜಸ್ವಂತ್ ಸಿಂಗ್ ಆಯೋಗ ನಿಗದಿಪಡಿಸಿರುವ ಎಲ್ಲ ಮಾನದಂಡಗಳನ್ನು ನಮ್ಮ ಶಿವಮೊಗ್ಗ ಪೂರ್ಣವಾಗಿ ಪೂರೈಸುತ್ತದೆ ಎಂದು ತಿಳಿಸಿದರು.
ಮಂಗಳೂರು ಪೀಠದ ವ್ಯಾಪ್ತಿಗೆ ಶಿವಮೊಗ್ಗವನ್ನು ಸೇರಿಸುವ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಕರಾವಳಿಯ ಸಹೋದರರ ಬಗ್ಗೆಯೂ ಪ್ರೀತಿ, ಗೌರವವಿದೆ. ಆದರೆ ಘಟ್ಟದ ಮೇಲಿರುವ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರಿಗೆ ಶಿವಮೊಗ್ಗವೇ ನ್ಯಾಯದ ಆಶಾಕಿರಣ ಎನ್ನುವುದು ನಮ್ಮ ಪ್ರಾಮಾಣಿಕ ನಿಲುವು. ಭೀಕರ ಮಳೆಗಾಲದಲ್ಲಿ ಶಿರಾಡಿ, ಚಾರ್ಮಾಡಿ ಇಲ್ಲವೆ ಆಗುಂಬೆ ಘಾಟಿಗಳಂತಹ ಅಪಾಯಕಾರಿ ರಸ್ತೆಗಳನ್ನು ದಾಟಿ ಜನರು ಮಂಗಳೂರಿಗೆ ಸಂಚರಿಸಿ ನ್ಯಾಯ ಪಡೆಯುವುದು ಅಸಾಧ್ಯ. ಅದಕ್ಕಾಗಿಯೇ ವಕೀಲರ ಸಮುದಾಯ ಮತ್ತು ವಿವಿಧ ಬಾರ್ ಅಸೋಸಿಯೇಷನ್‌ಗಳು ಮಂಗಳೂರು ಪ್ರಸ್ತಾಪವನ್ನು ತಿರಸ್ಕರಿಸಿವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಬಿಜೆಪಿ ಪ್ರಮುಖರಾದ ರಾಜು ತಲ್ಲೂರು, ರಾಜೇಶ್ ಕಾಮತ್, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಹಿರಿಯ ವಕೀಲ ಕೆ.ಬಸಪ್ಪ ಗೌಡ ಇತರರಿದ್ದರು.
"

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕೆಂಬ ವಕೀಲರ ಬೇಡಿಕೆ ಸಮಂಜಸವಾಗಿದೆ. ಮಂಗಳೂರಿನಲ್ಲಿ ಈ ಪೀಠ ಸ್ಥಾಪಿಸುವುದು ಹುಚ್ಚು ದೊರೆಯ ತೀರ್ಮಾನದಂತಾಗುತ್ತದೆ. ಜೂ.1ರಂದು ಸಿಎಂ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಆಗಮಿಸುವ ಮಾಹಿತಿಯಿದೆ. ಅವರು ಆಗಮಿಸಿದಾಗ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಆರಂಭಿಸಲು ಸರ್ಕಾರ ಬದ್ಧವಿದೆ ಎಂದು ಘೋಷಿಸಬೇಕು.

— ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net