ವಕೀಲರ ಬಂಧನ ಕಾನೂನುಬಾಹಿರ | protest

ವಕೀಲರಾದ ರಂಗನಾಥ್, ಮಧು ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಭದ್ರಾವತಿ ವಕೀಲರು ನಗರ ಸಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು.  ಬಿ.ಸಿ.ಕೇಶವಮೂರ್ತಿ, ಶಿವಕುಮಾರ್, ಟಿ.ಚಂದ್ರೇಗೌಡ ಇತರರಿದ್ದರು.
ವಕೀಲರಾದ ರಂಗನಾಥ್, ಮಧು ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಭದ್ರಾವತಿ ವಕೀಲರು ನಗರ ಸಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಿ.ಸಿ.ಕೇಶವಮೂರ್ತಿ, ಶಿವಕುಮಾರ್, ಟಿ.ಚಂದ್ರೇಗೌಡ ಇತರರಿದ್ದರು.
Published on
ಭದ್ರಾವತಿ: ಯಾವುದೇ ವಿಚಾರಣೆ ಇಲ್ಲದೆ, ನೋಟಿಸ್ ನೀಡದೆ ವಿನಾಕಾರಣ ವಕೀಲರಿಬ್ಬರನ್ನು ನಗರವೃತ್ತ ನಿರೀಕ್ಷಕಿ ಏಕಾಏಕಿ ಠಾಣೆಗೆ ಕರೆತಂದು ಕೂರಿಸಿಕೊಂಡಿರುವ ಕ್ರಮ ಸರಿಯಲ್ಲ ಎಂದು ಖಂಡಿಸಿ ಸಿಪಿಐ ಕಚೇರಿ ಎದುರು ಬುಧವಾರ ವಕೀಲರು ಪ್ರತಿಭಟನೆ ನಡೆಸಿದರು.
ಕೋರ್ಟ್ ಕಲಾಪಗಳಿಂದ ಹೊರಗುಳಿದು ನಗರವೃತ್ತ ನಿರೀಕ್ಷಕ ಕಚೇರಿವರೆಗೂ ಮೆರವಣಿಗೆ ನಡೆಸಿದ ವಕೀಲರು, ಹೊಸ ಕಾಯ್ದೆ ಪ್ರಕಾರ ವಕೀಲರೊಬ್ಬರನ್ನು ಬಂಧಿಸುವಾಗ ಸಂಘಕ್ಕೆ ನೋಟಿಸ್ ಕೊಡಬೇಕು. ನೋಟಿಸ್ ಕೊಡದೆ ದಸ್ತಗಿರಿ ಮಾಡಬಾರದೆಂದು ಕಾನೂನಿದೆ. ಅದನ್ನು ಉಲ್ಲಂಘನೆ ಮಾಡಿರುವ ಸಿಪಿಐ ನಾಗಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ವಕೀಲರಾಗಿದ್ದು ನೋಟರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಂಗನಾಥ್ ಹಾಗೂ ಮಧು ಅವರನ್ನು ಅಕ್ರಮವಾಗಿ ಬಂಧಿಸಿ ಬೆಳಂಬೆಳಗ್ಗೆ ಮನೆಯಿಂದ ವಿಚಾರಣೆಗಾಗಿ ಕರೆತಂದು ಬಂಧನದಲ್ಲಿ ಇಟ್ಟಿರುವುದು ಕಾನೂನು ಉಲ್ಲಂಘನೆ. ಸಿಪಿಐ ನಾಗಮ್ಮ ಹಾಗೂ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ವಕೀಲರ ಪರಿಷತ್‌ಗೆ ಬುಧವಾರ ಚುನಾವಣೆ ನಡೆಯುತ್ತಿದ್ದು ವಕೀಲರಿಬ್ಬರನ್ನು ಬಂಧನದಲ್ಲಿ ಇಡುವ ಮೂಲಕ ಮತದಾನದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದು ಸಹ ಕಾನೂನು ಬಾಹಿರ ಕೃತ್ಯ. ಘಟನೆಗೆ ಕಾರಣರಾದ ಸಿಪಿಐ ಹಾಗೂ ಅವರ ಸಿಬ್ಬಂದಿ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಕೀಲರಾದ ರಂಗನಾಥ್ ಹಾಗೂ ಮಧು ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಕೇಶವಮೂರ್ತಿ, ಕಾರ್ಯದರ್ಶಿ ಶಿವಕುಮಾರ್, ಟಿ.ಚಂದ್ರೇಗೌಡ, ಕೆ.ಎನ್.ಶ್ರೀಹರ್ಷ, ಕೆ.ಎಸ್.ಸುಧೀಂದ್ರ, ಕೂಡ್ಲಿಗೆರೆ ಮಂಜುನಾಥ್, ವಿನಯ್, ಶ್ರೀನಿವಾಸ್, ಉದಯಕುಮಾರ್, ರವಿಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net