ಸೊರಬ: ಗ್ರಂಥಾಲಯವು ನಮ್ಮಲ್ಲಿನ ಜ್ಞಾನ ವೃದ್ಧಿಸುವ ಕೇಂದ್ರ. ಗ್ರಂಥಾಲಯದ ಸೌಲಭ್ಯ ಪಡೆದು ಸಮಾಜದ ಆದರ್ಶ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ತಾಪಂ ಇಒ ಕೆ.ಜಿ.ಶಶಿಧರ್ ಹೇಳಿದರು.
ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥ್ ಅವರ ಜನ್ಮದಿನದ ಅಂಗವಾಗಿ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕಗಳು ಉತ್ತಮ ಸ್ನೇಹಿತರು. ನಿತ್ಯ ಓದುವ ಹವ್ಯಾಸವನ್ನು ಬೆಳೆಸುವ ಕೇಂದ್ರ ಗ್ರಂಥಾಲಯ. ಗ್ರಾಮೀಣ ಪ್ರದೇಶದ ಜನರಲ್ಲಿ ಗ್ರಂಥಾಲಯದ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಎಸ್. ಓಟೂರು ಮಾತನಾಡಿ, ಸರ್ಕಾರ ಅನೇಕ ಸೌಕರ್ಯ ಒದಗಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ ಜ್ಞಾನ ಮತ್ತು ವಿಷಯವನ್ನು ತಲುಪಿಸಲು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೇಂದ್ರಗಳಾಗಿವೆ ಎಂದರು.
ಓದುಗರನ್ನು ಪ್ರೋತ್ಸಾಹಿಸಿ: ಗ್ರಂಥಾಲಯಕ್ಕೆ ಹೊಸ ಆಯಾಮ ನೀಡಿದವರು ಎಸ್.ಆರ್.ರಂಗನಾಥ್ ಎಂದು ಗ್ರಂಥಪಾಲಕ ಕೃಷ್ಣಮೂರ್ತಿ ಹೇಳಿದರು. ಅವರ ಅನುಭವದ ಸಾರವನ್ನು ಗ್ರಂಥಪಾಲಕರು ಅನುಸರಿಸಬೇಕು. ಓದುಗರು ನಿತ್ಯ ಬರಲು ಗ್ರಂಥಪಾಲಕರು ಪ್ರೋತ್ಸಾಹಿಸಬೇಕು. ಗ್ರಂಥಾಲಯ ಸೌಲಭ್ಯಗಳು ಸಾರ್ವಜನಿಕರಿಗೆ ಸರಿಯಾದ ರೀತಿ ತಲುಪಿಸಬೇಕು ಎಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕ ಶ್ರೀರಾಮ್ ಮಾತನಾಡಿ, ಗ್ರಂಥಾಲಯಗಳು ದೇವಾಲಯ ಇದ್ದಂತೆ. ಗ್ರಂಥಾಲಯ ಡಿಜಿಟಲೀಕರಣ ಆಗುತ್ತಿವೆ. ಡಿಜಿಟಲೀಕರಣಕ್ಕೆ ನಾವು ಒಳಗಾಗಬೇಕಿದೆ. ಗ್ರಂಥಾಲಯ ಎಲ್ಲ ವ್ಯಕ್ತಿಗೂ ಸಂಬಂಧಿಸಿದ್ದು ಎಂದು ಹೇಳಿದರು.
ಪಿಡಿಒಗಳ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಗ್ರಂಥಾಲಯ ಮೇಲ್ವಿಚಾರಕರ ಸಂಘದ ರಾಜ್ಯ ಉಪಾಧ್ಯಕ್ಷ ಬಲೀಂದ್ರಪ್ಪ ಮಾತನಾಡಿ, ಗ್ರಂಥಪಾಲಕರು ಅತ್ಯಂತ ಕಡಿಮೆ ವೇತನದಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಸೌಕರ್ಯ ಇಲ್ಲ ಎಂದು ತಿಳಿಸಿದರು.
ಗ್ರಂಥಾಲಯ ಮೇಲ್ವಿಚಾರಕರ ಸಂಘದ ತಾಲೂಕು ಅಧ್ಯಕ್ಷ ಭೈರಪ್ಪ, ಅಕ್ಷರ ದಾಸೋಹ ತಾಲೂಕು ಸಹಾಯಕ ನಿರ್ದೇಶಕ ಡಾ. ಕೆ.ಸಿ.ಶ್ರೀಕಾಂತ್, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಡಿ.ಮಂಜಪ್ಪ, ಪಿಡಿಒಗಳ ಸಂಘದ ತಾಲೂಕು ಅಧ್ಯಕ್ಷ ರಿಯಾಜ್, ಸಾವಿತ್ರಿ, ಆನಂದ್ ಇತರರಿದ್ದರು.