ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಭದ್ರಾವತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಿಗೆ ಬಿಜೆಪಿ ಯುವ ಮೋರ್ಚಾ ಪ್ರಮುಖರು ದೂರು ಸಲ್ಲಿಸಿದರು. ಪ್ರಜ್ವಲ್, ಲಿಖಿತ್, ಪ್ರದೀಪ್, ರಘುರಾವ್, ಜಿ.ಧರ್ಮಪ್ರಸಾದ್ ಇತರರಿದ್ದರು.
ಭದ್ರಾವತಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಯುವ ಮೋರ್ಚಾ ಘಟಕ ಶುಕ್ರವಾರ ದೂರು ದಾಖಲಿಸಿದೆ.
ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ಕರೀಂಗಜ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನೀಲಂಬಜಾರ್‌ನಲ್ಲಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಭಾಷಣ ಮಾಡುವಾಗ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಷಪೂರಿತ ಹಾವುಗಳಿದ್ದಂತೆ. ನೀವು ನಮಾಜ್ ಮಾಡುವಾಗ ನಿಮ್ಮ ಮುಂದೆ ವಿಷಪೂರಿತ ಹಾವು ಚಲಿಸುತ್ತಿದ್ದರೆ ನೀವು ನಿಮ್ಮ ಪ್ರಾರ್ಥನೆಯನ್ನು ನಿಲ್ಲಿಸಿ ಹಾವನ್ನು ಸಾಯಿಸಬಹುದು ಎಂದು ಕುರಾನ್ ಸಹ ಹೇಳುತ್ತದೆ. ಅದರಂತೆ ಆರ್‌ಎಸ್‌ಎಸ್ ಬಿಜೆಪಿ ಸಿದ್ಧಾಂತಗಳನ್ನು ಸಾಯಿಸಬೇಕು ಎಂದು ಮಾತನಾಡಿದ್ದಾರೆ ಎಂದು ದೂರಿದರು.
ಖರ್ಗೆ ಹೇಳಿಕೆ ಒಂದು ರೀತಿ ಗುಂಪು ಹತ್ಯೆಗೆ ಪ್ರಚೋದನೆ ನೀಡಿದಂತೆ. ಸಮಾಜದಲ್ಲಿ ಭಯ ಹುಟ್ಟಿಸಿ ಕೋಮು ಘರ್ಷಣೆಗೆ ಪ್ರೇರೇಪಿಸುವಂತಿದೆ. ಹಿಂದೂಗಳ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಸಂಪೂರ್ಣ ಅವಮಾನವಾಗಿದೆ. ಇಂತಹ ಹೇಳಿಕೆಗಳು ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯೂ ಆಗಿದೆ. ಇಂತಹ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಪ್ರಜ್ವಲ್, ಲಿಖಿತ್, ಪ್ರದೀಪ್, ರಘುರಾವ್, ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಎಂ.ಎಸ್.ಸುರೇಶಪ್ಪ, ಜಿ.ವಿ.ಕುಮಾರ್, ಸೋಮಶೇಖರ್, ಸಿಮೆಂಟ್ ಮಂಜಣ್ಣ, ಕೇಶವ ಇತರರಿದ್ದರು.