ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ | Non-partisan protest

ಸಾಗರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು. ಹರತಾಳು ಹಾಲಪ್ಪ, ದಿನೇಶ್ ಶಿರವಾಳ, ಚೇತನರಾಜ್ ಕಣ್ಣೂರು, ರಮೇಶ್ ಕೆಳದಿ ಇತರರಿದ್ದರು.
ಸಾಗರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು. ಹರತಾಳು ಹಾಲಪ್ಪ, ದಿನೇಶ್ ಶಿರವಾಳ, ಚೇತನರಾಜ್ ಕಣ್ಣೂರು, ರಮೇಶ್ ಕೆಳದಿ ಇತರರಿದ್ದರು.
Published on
ಸಾಗರ: ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಸಂಘದ ಪ್ರಮುಖರು ಸಾಗರದ ಮಹಾಗಣಪತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಂತಿಮವಾಗಿ ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಸ್ತೂರಿ ರಂಗನ್ ವರದಿ ಹೆಸರಿನಲ್ಲಿ ಮಲೆನಾಡು ರೈತರ ಬದುಕಿಗೆ ಕೊಳ್ಳಿ ಇಡುವುದನ್ನು ಸಹಿಸುವುದಿಲ್ಲ. ರಾಜ್ಯದ 20668 ಎಕರೆ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ರಾಜ್ಯಾದ್ಯಂತ್ಯ 1449, ಜಿಲ್ಲೆಯ 449 ಹಳ್ಳಿಗಳು ಇದರ ವ್ಯಾಪ್ತಿಯಲ್ಲಿವೆ. ರೈತರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಕೇರಳ ರಾಜ್ಯದಲ್ಲಿ ಸರ್ಕಾರ, ಪಕ್ಷಗಳು, ಸರ್ಕಾರಿ ನೌಕರರು ಒಟ್ಟಾಗಿ ವರದಿ ವಿರುದ್ಧ ಧ್ವನಿ ಎತ್ತಿದ್ದರಿಂದ ಪರಿಷ್ಕೃತ ವರದಿ ಜಾರಿಗೊಳಿಸಲಾಗಿತ್ತು. ಅಲ್ಲಿ ದೈಹಿಕವಾಗಿ ಸಮೀಕ್ಷೆ ನಡೆಸಿ ಸಾಕಷ್ಟು ಪ್ರದೇಶವನ್ನು ಕೈಬಿಡಲಾಗಿತ್ತು. ನಮ್ಮ ರಾಜ್ಯದಲ್ಲಿಯೂ ಸಹ ಎಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕು. ವರದಿ ಕುರಿತು ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆಯುತ್ತೇನೆ ಎಂದಿರುವುದನ್ನು ನಾನು ಸ್ವಾಗತಿಸುತ್ತೇನೆ. ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸದರೆ ಮತ್ತೊಂದು ರೂಪದಲ್ಲಿ ನಮ್ಮನ್ನು ಸುತ್ತುವರಿಯುತ್ತದೆ. ಜನವಸತಿ, ಕೃಷಿ ಚಟುವಟಿಕೆ ಸೇರಿ ಉಪಯೋಗಕ್ಕೆ ಬರುವ ಭೂಮಿಯನ್ನು ಹೊರತುಪಡಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಯಾದರೆ ಮಲೆನಾಡಿನ ಜನರಿಗೆ ಮರಣ ಶಾಸನವಾಗಲಿದೆ. ವರದಿ ವಿರೋಧಿಸಿ ನಿರಂತರ ಹೋರಾಟ ನಡೆಯುತ್ತಿದ್ದು, ರೈತ ಸಂಘ ಕೈಜೋಡಿಸಲಿದೆ. ಪಕ್ಷಭೇದ ಮರೆತು ಹೋರಾಟ ಮಾಡಿದರೆ ಮಾತ್ರ ವರದಿಯಿಂದ ಮುಕ್ತಿ ಪಡೆಯಲು ಸಾಧ್ಯ. ಗ್ರಾಮೀಣ ಅಭಿವೃದ್ಧಿಗೆ ಶಾಪವಾಗಲಿದೆ. ಹಾಗಾಗಿ ಮತ್ತೊಮ್ಮೆ ವರದಿಯನ್ನು ಮರು ಪರಿಶೀಲನೆ ಮಾಡಬೇಕು. ಜನವಸತಿ ಪ್ರದೇಶವನ್ನು ಹೊರಗಿಟ್ಟು ದೈಹಿಕವಾಗಿ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕು. ವರದಿ ಜಾರಿಯಾದರೆ ರಾಜ್ಯದಲ್ಲಾಗುವ ಸಮಸ್ಯೆಗಳ ಕುರಿತು ಕೇಂದ್ರಕ್ಕೆ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಮನವರಿಕೆ ಮಾಡಿಕೊಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ಎಲ್ಲ ಸರ್ಕಾರಗಳು ಮಲೆನಾಡಿನ ಜನರ ಮೇಲೆ ಪ್ರಹಾರ ಮಾಡುತ್ತಲೇ ಬಂದಿವೆ. ಈಗಾಗಲೇ ವನ್ಯಜೀವಿ ವಲಯದ ಕಾನೂನಿನಿಂದ ಜನ ಹೈರಾಣಾಗಿದ್ದಾರೆ. ಇನ್ನು ಅತಿ ಸೂಕ್ಷ್ಮ ವಲಯ ಎಂದು ಘೋಷಣೆಯಾದರೆ ಬದುಕಲು ಸಾಧ್ಯವೇ ಇಲ್ಲ. ಯಾವ ಕಾರಣಕ್ಕೂ ವರದಿ ಜಾರಿಯಾಗಲು ಬಿಡಬಾರದು ಎಂದು ಕರೆ ನೀಡಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾ ರ‌್ಯಾಲಿಗೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ್, ಚೇತನರಾಜ್ ಕಣ್ಣೂರು, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಶಿವು, ಪ್ರಸನ್ನ ಕೆರೆಕೈ, ಸೋಮಶೇಖರ್, ಸಂತೋಷ್, ಸುನೀಲ್, ಚಂದ್ರು ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net