ಕರಿಮನೆ ರಸ್ತೆ ದುರಸ್ತಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಕಿಮ್ಮನೆ ಸಮ್ಮುಖದಲ್ಲಿ ಕೆಪಿಸಿ ಅಧಿಕಾರಿ ಪ್ರಕಾಶ್ ಬ್ರಹ್ಮಾವರ್‌ಗೆ ವಿವಿಧ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸುಬ್ರಹ್ಮಣ್ಯ, ರಮೇಶ್, ಸುಧಾಕರ್, ಗೋಪಾಲ್, ಸುಮಾ ಸುಬ್ರಹ್ಮಣ್ಯ ಇತರರಿದ್ದರು.
ಹೊಸನಗರ: ಕರಿಮನೆ ಗ್ರಾಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದ 2.41 ಕೋಟಿ ರೂ. ಅನುದಾನವನ್ನು ಬೇರೆಡೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಕೆಪಿಸಿಯ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನವನ್ನು ಗುರುವಾರ ತಾಲೂಕಿನ ಚಕ್ರಾನಗರ ಕಾನಮನೆ ಸರ್ಕಲ್ ಬಳಿ ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿದರು.
50 ವರ್ಷಗಳ ಹಿಂದೆ ಕರ್ನಾಟಕ ವಿದ್ಯುತ್ ನಿಗಮದವರು ಕರಿಮನೆ ಗ್ರಾಮದ ನಿಕಲ್ನಿಂದ ಸಾಲ್, ಹೊಸಬೀಡು, ಮಠದಜೆಡ್ಡು, ಹಲಸಿನಹಳ್ಳಿ, ಮಾನಿಕಾನ್, ಹಾಲಗದ್ದೆ ಮಾರ್ಗವಾಗಿ ಚಕ್ರಾ-ಸಾವೇಹಕ್ಲು ಡ್ಯಾಂಗೆ ಹೋಗಲು ಡಾಂಬರ್ ರಸ್ತೆ ನಿರ್ಮಿಸಿದ್ದರು. ಆದರೆ 50 ವರ್ಷಗಳಿಂದ ರಸ್ತೆಯನ್ನು ದುರಸ್ತಿ ಮಾಡದೆ ಸಂಪೂರ್ಣ ಹಾಳಾಗಿದೆ. ಡ್ಯಾಂ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿ ಹಿನ್ನೀರಿನಲ್ಲಿ ವಾಸಿಸುತ್ತಿರುತ್ತಾರೆ. ಇಲ್ಲಿ ಸುಮಾರು 2000 ಜನಸಂಖ್ಯೆ ಇದೆ. ಅವರಿಗೆ ಇದೇ ರಸ್ತೆ ಪ್ರಮುಖ ಸಂಪರ್ಕ ಕೊಂಡಿ. ನಿಗಮದ ವಾಹನಗಳೂ ಸಹ ಇದೇ ರಸ್ತೆಯಲ್ಲಿ ಚಕ್ರಾ-ಸಾವೇಹಕ್ಕು ಡ್ಯಾಂಗಳಿಗೆ ಓಡಾಡುತ್ತವೆ.
ಈ ರಸ್ತೆಯನ್ನು ಕೆಪಿಸಿಯ ಸಿಎಸ್‌ಆರ್ ಹಣದಿಂದ ದುರಸ್ತಿ ಪಡಿಸಬೇಕೆಂದು ಗ್ರಾಪಂ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದರಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೋರಿಕೆ ಮೇರೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಸಿಎಂ ಸಹ ಕಾಮಗಾರಿಯನ್ನು ಅನುಮೋದಿಸಿ ನಿಗಮಕ್ಕೆ ಪತ್ರ ಕಳಿಸಿದ್ದಾರೆ. ನಿಗಮದವರು ರಸ್ತೆಯನ್ನು ಪರಿಶೀಲಿಸಿ 2.41 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಕೇಂದ್ರ ಕಚೇರಿಗೆ ಕಳಿಸಿದ್ದಾರೆ. ಇಷ್ಟಾಗಿಯೂ ಕೇಂದ್ರ ಕಚೇರಿಯಲ್ಲಿ ಈ ಕಾಮಗಾರಿಯನ್ನು ಕೈಬಿಟ್ಟಿರುವುದಾಗಿ ತಿಳಿದು ಬಂದಿದೆ ಎಂದು ಆರೋಪಿಸಿದರು.
ಪ್ರತಿಭಟನೆ ವಿಷಯ ತಿಳಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಗ್ರಾಮಸ್ಥರಿಂದ ಮತ್ತು ಕೆಪಿಸಿ ಅಧಿಕಾರಿ ಪ್ರಕಾಶ ಬ್ರಹ್ಮಾವರ ಅವರಿಂದ ಮಾಹಿತಿ ಪಡೆದರು. ಈ ಸಂಬಂಧ ಕೆಪಿಸಿಗೆ ಮನವಿ ಕಳಿಸಿ. ನಾನು ಕೂಡ ಸಚಿವರು ಮತ್ತು ಕೆಪಿಸಿ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಸದ್ಯಕ್ಕೆ ಹೋರಾಟ ಕೈಬಿಡಲು ಮನವಿ ಮಾಡಿದ್ದರಿಂದ ಪ್ರತಿಭಟನೆ ಹಿಂಪಡೆದರು.