ತೀರ್ಥಹಳ್ಳಿ: ಕನ್ನಡಕ್ಕೆ ವಿಶ್ವದ ಯಾವುದೇ ಭಾಷೆಗೆ ಪದವನ್ನು ನೀಡುವ ಶಕ್ತಿ ಇದೆ. ಕನ್ನಡವನ್ನು ಬಳಸಿದರೆ ಅದು ತಾನಾಗಿಯೇ ಬೆಳೆಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ಶತಕಂಠ ನಾಡಗೀತೆ, ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೈಕ್ಷಣಿಕ ಪ್ರಗತಿ ಹೊಂದಿದ ನಂತರ ಉದ್ಯೋಗಕ್ಕಾಗಿ ನಗರಗಳನ್ನು ಸೇರುವ ಮಕ್ಕಳು ಕನ್ನಡತನವನ್ನು ಜಾಗ್ರತೆಯಿಂದ ಕಾಪಾಡಬೇಕು. ಇಲ್ಲಿರುವ ನಿಘಂಟು, ಪದಗಳು ಎಲ್ಲ ಭಾಷೆಗಳಿಗೂ ವರದಾನ. ಮಾತೃಭಾಷೆ ಬಗ್ಗೆ ಕೀಳರಿಮೆ ಬೇಡ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳು ಕವನ, ಕಥಾ ಸಂಕಲನಗಳನ್ನು ಹೆಚ್ಚಾಗಿ ಮುದ್ರಿಸುತ್ತಿದ್ದಾರೆ ಎಂದರು.
ರಾಜ್ಯೋತ್ಸವ ಅಂದರೆ ಸಂಭ್ರಮವಲ್ಲ. ನಮ್ಮ ಜವಾಬ್ದಾರಿಗಳನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮ. ಯುವ ಜನರು ತಮ್ಮ ಸೃಜನಶೀಲತೆಯನ್ನು ಮೊಬೈಲ್‌ಗೆ ಮೀಸಲಿಡಬಾರದು. ಪಠ್ಯ, ಪಠ್ಯೇತರ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ತಾಯಂದಿರು ಮಕ್ಕಳನ್ನು ಶಾಲೆಗಳಿಗೆ ಕಳಿಸುವಾಗ ಬಹುತೇಕ ಇಂಗ್ಲಿಷ್ ಬಳಸುತ್ತಾರೆ. ಕೊನೆಯದಾಗಿ ಕನ್ನಡ ಪದದಿಂದ ಮುಗಿಸುತ್ತಾರೆ. ಅರ್ಥವಾಗದ ಕನ್ನಡ ಬಳಸುತ್ತಾರೆ. ಇಂತಹ ಹತ್ತಾರು ಹಾಸ್ಯ ಘಟನೆಗಳು ಭಾಷೆಯ ಮೋಹದಿಂದ ಸೃಷ್ಟಿಯಾಗುತ್ತವೆ. ಅವ್ವ, ಅಮ್ಮನಾಗಿ, ಅಮ್ಮ ಮಾಮ್ ಆಗಿ ಕೊನೆಯದಾಗಿ ಮಿಯಾವ್ ಆಗುತ್ತದೆ ಎಂದು ಪ್ರಾಧ್ಯಾಪಕ ಶ್ರೀಪತಿ ಹಳಗುಂದ ಹಾಸ್ಯ ಚಟಾಕಿ ಹಾರಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಕರವೇ ಅಧ್ಯಕ್ಷ ಯಡೂರು ಸುರೇಂದ್ರ, ಪ್ರಮುಖರಾದ ಲೀಲಾವತಿ ಜಯಶೀಲ, ರೇಣುಕಾ ಹೆಗಡೆ, ಪ್ರಾಚಾರ್ಯೆ ಕೆ.ಸಿ.ಸೌಮ್ಯಾ, ಪ್ರಾಧ್ಯಾಪಕರಾದ ಮಾರುತಿ, ಗಣಪತಿ ಇದ್ದರು.