ಕಾಗೋಡು ಚಳವಳಿ ಐತಿಹಾಸಿಕ ಹೋರಾಟ | book release

ಸಾಗರದಲ್ಲಿ ‘ಎರಡು ಖಂಡುಗ’ ಕಾದಂಬರಿಯನ್ನು ಜನಪರ ಹೋರಾಟಗಾರ ಸುಧೀರ್‌ಕುಮಾರ್ ಮುರೊಳ್ಳಿ ಬಿಡುಗಡೆ ಮಾಡಿದರು. ಬಿ.ಆರ್.ಜಯಂತ್, ಡಾ. ಜಿ.ಸಣ್ಣಹನುಮಪ್ಪ, ಶ್ರೀಧರ ಕೆ.ಎ., ಮೋಹನ್‌ಕುಮಾರ್ ಇತರರಿದ್ದರು.
ಸಾಗರದಲ್ಲಿ ‘ಎರಡು ಖಂಡುಗ’ ಕಾದಂಬರಿಯನ್ನು ಜನಪರ ಹೋರಾಟಗಾರ ಸುಧೀರ್‌ಕುಮಾರ್ ಮುರೊಳ್ಳಿ ಬಿಡುಗಡೆ ಮಾಡಿದರು. ಬಿ.ಆರ್.ಜಯಂತ್, ಡಾ. ಜಿ.ಸಣ್ಣಹನುಮಪ್ಪ, ಶ್ರೀಧರ ಕೆ.ಎ., ಮೋಹನ್‌ಕುಮಾರ್ ಇತರರಿದ್ದರು.
Published on
ಸಾಗರ: ಐತಿಹಾಸಿಕ ಕಾಗೋಡು ಚಳವಳಿ ಯಾವ ಹಕ್ಕಿಗಾಗಿ ನಡೆದಿತ್ತೋ ಆ ಹಕ್ಕನ್ನು ಪಡೆದ ಫಲಾನುಭವಿಗಳು ಅದನ್ನು ಮರೆತು ನಡೆದದ್ದು ಮಾತ್ರ ವಿಪರ್ಯಾಸ ಎಂದು ಜನಪರ ಹೋರಾಟಗಾರ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಶ್ರೀಧರ ಕೆ.ಎ. ಕೆಳದಿಪುರ ಬರೆದಿರುವ ‘ಎರಡು ಖಂಡುಗ’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.
ಈಗಿನ ಪೀಳಿಗೆಗೆ ದೇಶವನ್ನು ಆಂಗ್ಲರ ಕಪಿಮುಷ್ಟಿಯಿಂದ ಮುಕ್ತಗೊಳಿಸಿದ ಸ್ವಾತಂತ್ರೃ ಚಳವಳಿ ಬಗ್ಗೆ ಕೇಳುವ ಆಸಕ್ತಿಯಿಲ್ಲ. ಗೇಣಿ ಬದುಕಿನಿಂದ ಹೊರಗೆ ತಂದ ಉಳುವವನೇ ಹೊಲದೊಡೆಯ ಚಳವಳಿ ಬಗ್ಗೆ ಕೇಳುವ ತಾಳ್ಮೆ ಇಲ್ಲ. ಹೋರಾಟದ ಪ್ರತಿಫಲ ಉಂಡವರು ನಾವು ಯಾವ ರಕ್ತವನ್ನು ಹಂಚಿಕೊಂಡು ಹುಟ್ಟಿದ್ದೇವೆ. ಆ ರಕ್ತದ ಕನಸು ಏನಾಗಿತ್ತು, ಯಾವ ಹಕ್ಕಿಗಾಗಿ ನಾವು ಪರಿತಪಿಸಿದ್ದೆವೋ ಆ ಹಕ್ಕಿನ ವಾರಾಸುದಾರರಾಗಿ ನಾವು ನಡೆದುಕೊಳ್ಳುತ್ತಿರುವ ರೀತಿ ಸರಿಯಿದೆಯೇ ಎಂದು ತಿರುಗಿ ನೋಡುವ ಸಂಕೀರ್ಣ ಕಾಲಘಟ್ಟ ಇದಾಗಿದೆ ಎಂದರು.
ಕಾಗೋಡು ಸತ್ಯಾಗ್ರಹ ಮೂಲಕ ಮನೆಮನೆಗೆ ತೆರಳಿ ಗೇಣಿ ರೈತರು ಉಳುಮೆ ಮಾಡುತ್ತಿದ್ದ ಭೂಮಿಗೆ ಹಕ್ಕುಪತ್ರ ನೀಡಲು ಶ್ರಮಿಸಿದವರಲ್ಲಿ ಬಿ.ಆರ್.ಜಯಂತ್ ಅವರಂತಹ ನಾಯಕರು ನಮ್ಮ ಎದುರಿಗಿದ್ದಾರೆ. ಗೇಣಿ ಹೋರಾಟದ ಸಂದರ್ಭದ ಚಿತ್ರಣವನ್ನು ಲೇಖಕ ಶ್ರೀಧರ್ ಅವರು ರಚಿಸಿ ಅದನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇಂತಹ ಐತಿಹಾಸಿಕ ಘಟನೆಗಳ ಸತ್ಯಗಳು ದಾಖಲಾಗಬೇಕು ಎಂದು ತಿಳಿಸಿದರು.
ಹೋರಾಟದ ಹಾದಿಯ ನೆನಪು ಕುರಿತು ಮಾತನಾಡಿದ ಬಿ.ಆರ್.ಜಯಂತ್, ಕಾಗೋಡು ಹೋರಾಟದ ದಿನಗಳು ಇಂದಿಗೂ ನನಗೆ ಆಪ್ತವಾಗಿದೆ. ಅದನ್ನು ಕೃತಿ ಮೂಲಕ ದಾಖಲಿಸುವ ಕೆಲಸವನ್ನು ಶ್ರೀಧರ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಆ ದಿನಗಳಲ್ಲಿ ಗೇಣಿ ರೈತರ ಮನೆಬಾಗಿಲಿಗೆ ದಾಖಲೆ ಸಂಗ್ರಹಿಸಲು ಹೋದಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬಂದಿತ್ತು. ಆದರೂ ಧೃತಿಗೆಡದೆ ಗೇಣಿ ರೈತರಿಗೆ ಭೂಮಿ ಕೊಟ್ಟ ತೃಪ್ತಿ ನಮಗೆ ಇದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ, ಲೇಖಕ ಶ್ರೀಧರ ಕೆಳದಿಪುರ, ಮೋಹನ್‌ಕುಮಾರ್, ಡಾ. ಎ.ಬಿ.ಉಮೇಶ್, ಸುರೇಶ್ ಜಂಬಾನಿ, ಈಶ್ವರ ನಾಯ್ಕ್ ಕುಗ್ವೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net