ನಶಾಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ

ಭದ್ರಾವತಿ ಸತ್ಯಸಾಯಿ ಪ್ರೌಢಶಾಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವ್ಯಾಪಿ ಅಭಿಯಾನ ವೀಕ್ಷಿಸಿದ ವಿದ್ಯಾರ್ಥಿಗಳು.
ಭದ್ರಾವತಿ ಸತ್ಯಸಾಯಿ ಪ್ರೌಢಶಾಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವ್ಯಾಪಿ ಅಭಿಯಾನ ವೀಕ್ಷಿಸಿದ ವಿದ್ಯಾರ್ಥಿಗಳು.
Published on
ಭದ್ರಾವತಿ: ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನದಿಂದ ದೂರವಿರಬೇಕು ಎಂದು ಬಿಇಒ ಕೆ.ಸಿ.ಸುರೇಶ್ ಹೇಳಿದರು.
ಸತ್ಯಸಾಯಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಕಸಿತ ಭಾರತಕ್ಕಾಗಿ ನಶಾಮುಕ್ತ ಯುವ ಸಂಕಲ್ಪ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಮಾತನಾಡಿ, ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹೊಂದಿರಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಬೇಕು. ಈ ಹಂತದಲ್ಲಿ ಮಾದಕವಸ್ತು ವ್ಯಸನ ರೂಢಿಸಿಕೊಂಡರೆ ಗುರಿ ಸಾಧಿಸಲು ಸಾಧ್ಯವಿಲ್ಲ. ಅಲ್ಲದೆ ಆರೋಗ್ಯವೂ ಹದಗೆಡುತ್ತದೆ ಎಂದರು.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರಭಾಕರ್ ಬೀರಯ್ಯ ಮಾತನಾಡಿ, ಯುವಶಕ್ತಿ ರಾಷ್ಟ್ರದ ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಮಾದಕವಸ್ತು ವ್ಯಸನದಿಂದ ದೂರವಿದ್ದು, ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಬೇಕು. ಜ್ಞಾನ ಹಾಗೂ ಕೌಶಲವನ್ನು ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ತರಲು ಬಳಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮಾದಕ ವಸ್ತು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲು ಪ್ರತಿಜ್ಞೆ ಕೈಗೊಂಡರು. ಸಂಸ್ಥೆ ಜಂಟಿ ಆಡಳಿತಾಧಿಕಾರಿ ಸೌಮ್ಯಾ ಪ್ರತಿಜ್ಞಾವಿಧಿ ಬೋಧಿಸಿದರು. ಅಭಿಯಾನ ಅಂಗವಾಗಿ ಮಾದಕ ವಸ್ತು ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವುಳ್ಳ ನಾಟಕವನ್ನು ವಿದ್ಯಾರ್ಥಿಗಳು ಎಲ್‌ಇಡಿ ಪರದೆಯಲ್ಲಿ ವೀಕ್ಷಿಸಿದರು.
ವಿಕಸಿತ ಭಾರತಕ್ಕಾಗಿ ನಶಾಮುಕ್ತ ಯುವ ಸಂಕಲ್ಪ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ ಕಾರ್ಯಕ್ರಮವನ್ನು ಸತ್ಯಸಾಯಿ ಪ್ರೌಢಶಾಲೆಯ 220 ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net