ರಾಜಕಾರಣದಿಂದ ವ್ಯವಸ್ಥೆ ಬದಲಾವಣೆ ಅಸಾಧ್ಯI political system

ಬಹುಮುಖಿ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಸನ್ನ ದೇಸಿ ಜೀವನ ಪದ್ಧತಿಯೊಡನೆ ನನ್ನ ಪ್ರಯೋಗ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಬಹುಮುಖಿ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಸನ್ನ ದೇಸಿ ಜೀವನ ಪದ್ಧತಿಯೊಡನೆ ನನ್ನ ಪ್ರಯೋಗ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಂಗ ನಿರ್ದೇಶಕ ಪ್ರಸನ್ನ ಹೇಳಿಕೆ
  • ದೇಸಿ ಜೀವನ ಪದ್ಧತಿಯೊಡನೆ ನನ್ನ ಪ್ರಯೋಗ ಕುರಿತು ಉಪನ್ಯಾಸ
  • ಬಹುಮುಖಿ ಸಂಘಟನೆಯಿಂದ ಸಂವಾದ
ಶಿವಮೊಗ್ಗ: ನಾವಿಂದು ಬುದ್ಧಿ ಪ್ರಣೀತ ಜಗತ್ತಿನಲ್ಲಿ ಸಿಲುಕಿರುವುದೇ ಇಂದಿನ ಎಲ್ಲ ಸಂಕಷ್ಟಗಳಿಗೆ ಕಾರಣ. 60 ವರ್ಷಗಳ ಹಿಂದೆ ಇದ್ದ ಜೀವನ ಪದ್ಧತಿ (system) ಗೂ ಇಂದಿನ ಜೀವನ (life) ಶೈಲಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ಎಲ್ಲವನ್ನೂ ಬುದ್ಧಿಯ ದೃಷ್ಟಿಯಲ್ಲಿ ನೋಡುತ್ತಿದ್ದೇವೆಯೇ ಹೊರತು ಭಾವನೆಗಳ ಆಯಾಮದಿಂದಲ್ಲ ಎಂದು ರಂಗ ನಿರ್ದೇಶಕ ಪ್ರಸನ್ನ (prasanna) ಬೇಸರ ವ್ಯಕ್ತಪಡಿಸಿದರು.
ಬಹುಮುಖಿ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ದೇಸಿ ಜೀವನ ಪದ್ಧತಿಯೊಡನೆ ನನ್ನ ಪ್ರಯೋಗ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ದೇಸಿ ಜೀವನ ಪದ್ಧತಿ ಹಾಗೂ ರಂಗಭೂಮಿಗೆ ಅವಿನಾಭಾವ ಸಂಬಂಧವಿದೆ ಎಂದು ಪ್ರತಿಪಾದಿಸಿದರು.
ಹುಟ್ಟಿದ ಮಗು ಹಾಲು ಕುಡಿಯಲು ಮೊಬೈಲ್ ತೋರಿಸಬೇಕು. ಅಂದರೆ ಆ ಮಗುವಿಗೆ ಇನ್ನೂ ಶಿಕ್ಷಣವೇ ದೊರೆತಿಲ್ಲ. ಆದರೂ ಅದು ಶಿಕ್ಷಿತನಂತೆ ವರ್ತಿಸುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಬುದ್ಧಿ ಹಾಗೂ ವಾಣಿಜ್ಯ ಪ್ರಣೀತವಾಗಿದೆ. ಇದು ಎಲ್ಲ ಅನಾಹುತಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಸಂಕಟವನ್ನು ರಾಜಕೀಯದಿಂದ ಸರಿಪಡಿಸಲು ಸಾಧ್ಯವಿಲ್ಲ. ಯಾವುದೇ ಪಕ್ಷದಿಂದಲೂ ನಮ್ಮ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿಲ್ಲ. ಏಕೆಂದರೆ ರಾಜಕಾರಣಿಗಳಿಗೆ ಭ್ರಷ್ಟಾಚಾರವನ್ನು ಕಲಿಸಿದ್ದೇ ಜನರು. ಇಂದು ಎಲ್ಲರೂ ಸಂಕೇತಗಳನ್ನೇ ಬಳಸಿಕೊಂಡು ಬದುಕುತ್ತಿದ್ದಾರೆ. ಆಚಾರ ಯಾರಿಗೂ ಬೇಡ, ಎಲ್ಲರೂ ವಿಚಾರವನ್ನು ಬಯಸುವವರೇ ಆಗಿದ್ದಾರೆ ಎಂದು ಹೇಳಿದರು.
ಉಪನ್ಯಾಸ ಬಳಿಕ ಪ್ರಸನ್ನ ಸಂವಾದದಲ್ಲಿ ಪಾಲ್ಗೊಂಡರು. ಬಹುಮುಖಿ ಸಂಘಟನೆಯ ಧ್ಯೇಯೋದ್ದೇಶಗಳನ್ನು ಪ್ರೊ. ಎಚ್.ಎಸ್.ನಾಗಭೂಷಣ ವಿವರಿಸಿದರು.
ದೇಹದಲ್ಲಿ ಅತಿರೇಕವಿದೆ
ಮಾನವನ ಮಿದುಳು ಬೇರೆಲ್ಲ ಪ್ರಾಣಿಗಳಿಗಿಂತ ದೊಡ್ದದು. ಸಾವಿರಾರು ವರ್ಷಗಳಿಂದ ಈ ಮಿದುಳನ್ನು ದೊಡ್ಡದಾಗಿ ಬಳಸಿಕೊಳ್ಳುತ್ತಿರುವ ಮನುಷ್ಯ ಅದೇ ಕಾರಣದಿಂದ ದೇಹದಲ್ಲಿ ಅತಿರೇಕವನ್ನು ತುಂಬಿಕೊಂಡಿದ್ದಾನೆ. ಬುದ್ಧಿಜೀವಿ ಎಂಬ ಪದವನ್ನು ಸಂಭ್ರಮಿಸುತ್ತಿದ್ದೇವೆ. ಸಂಗೀತಗಾರರು, ಭಾಷಣಗಾರರಿಗೆ ಶಬ್ದಗಳ ಪರಿವೆಯೇ ಇರುವುದಿಲ್ಲ. ಇಂದು ನಾವು ವಿನಾಶದ ಅಂಚಿಗೆ ತಲುಪಿದ್ದೇವೆ. ಈ ವಿನಾಶ ತಡೆಯಲು ಸಾಧ್ಯವೇ ಇಲ್ಲ ಎಂದು ನಮ್ಮ ವೈಜ್ಞಾನಿಕ ಚಿಂತನೆ ಹೇಳುತ್ತಿದೆ. ಬಾಲ್ಯದ ನೆರವಿನೊಂದಿಗೆ ಬರವಣಿಗೆಗೆ ಮುಂದಾಗುವುದು ಸರಿಹೊಂದುವುದಿಲ್ಲ. ಇದಕ್ಕೆ ಆಚಾರ-ವಿಚಾರ ಎರಡೂ ಇರುವುದಿಲ್ಲ ಎಂದು ಪ್ರಸನ್ನ ಅರ್ಥೈಸಿದರು.

ವಿಚಾರವನ್ನು ಸುಳ್ಳಾಗಿಸಬಹುದು

ಆಚಾರವನ್ನು ಎಂದಿಗೂ ಸುಳ್ಳಾಗಿ ನಿರೂಪಿಸಲು ಸಾಧ್ಯವಿಲ್ಲ. ಆದರೆ ಎಷ್ಟೇ ಒಳ್ಳೆಯ ವಿಚಾರವನ್ನೂ ಸುಳ್ಳೆಂದು ಸಲೀಸಾಗಿ ನಿರೂಪಿಸಬಹುದು. ಆಚಾರವೇ ಸರಿ ಇಲ್ಲದಿದ್ದರೆ ವಿಚಾರ ಮಂಡನೆ ಸಾಧ್ಯವೇ ಇಲ್ಲ. ಪ್ರಗತಿಯೇ ಇಂದಿನ ಎಲ್ಲ ಅವಘಡಗಳಿಗೆ ಕಾರಣವಾಗಿದೆ. ಜನರ ಸಾಮೂಹಿಕ ಒತ್ತಾಸೆಯನ್ನೇ ಪ್ರಗತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಪ್ರಭುತ್ವವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ್ರಸನ್ನ ತಿಳಿಸಿದರು.


ಘೋರ ಸಂಕಟದಲ್ಲಿ ಶಿಕ್ಷಣ

ಇಂದು ಶಿಕ್ಷಣ ಘೋರ ಸಂಕಟಕ್ಕೆ ಸಿಲುಕಿದೆ. ಶಿಕ್ಷಣ 60 ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. ಮಕ್ಕಳ ಪ್ರಾಯೋಗಿಕ ಕಲಿಕೆಗೆ ಅವರ ಕ್ರಿಯಾಶೀಲತೆಗೆ ಒತ್ತು ನೀಡುತ್ತಿಲ್ಲ. ಕೇವಲ ಬುದ್ಧಿಯನ್ನು ಪ್ರಚೋದಿಸುವ ಕೆಲಸವಾಗುತ್ತಿದೆ. ನಾವು ಇಂದು ಬಹುತೇಕ ಮಾಡುತ್ತಿರುವ ಎಲ್ಲ ಕೆಲಸಗಳೂ ಸಹ ಬುದ್ಧಿಯನ್ನು ಆಶ್ರಯಿಸಿರುವಂಥದ್ದು. ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಇರುವಂಥದ್ದು. ಈ ಮನಸ್ಥಿತಿ ಬದಲಾಗಬೇಕು. ಸರಳತೆಯತ್ತ ಸಾಗಬೇಕು. ಇಂದಿನ ವ್ಯವಸ್ಥೆಯನ್ನು ಗಮನಿಸಿದರೆ ಭವಿಷ್ಯದಲ್ಲಿ ನಮ್ಮ ಪೀಳಿಗೆಗೆ ಎಂತಹ ಸಮಾಜವನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಭಯ ಕಾಡುತ್ತಿದೆ ಎಂದು ಪ್ರಸನ್ನ ಕಳವಳ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net