ಬಿಹಾರ ಫಲಿತಾಂಶಕ್ಕೂ ಬಾಂಬ್ ಸ್ಫೋಟಕ್ಕೂ ಲಿಂಕ್ ಮಾಡುವುದು ಮೂರ್ಖತನ |vijayendra

ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಂಬ್ ಸ್ಫೋಟಕ್ಕೆ ಲಿಂಕ್ ಮಾಡುತ್ತಿರುವುದು ದೇಶ ದ್ರೋಹದ ಕೆಲಸ
  • ಶಿವಮೊಗ್ಗದಲ್ಲಿ ಕಿಡಿಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
  • ಭಯೋತ್ಪಾದನೆ ಕೃತ್ಯಗಳ ವಿರುದ್ಧ ಎಲ್ಲರ ಒಗ್ಗಟ್ಟು ಪ್ರದರ್ಶನ ಮುಖ್ಯ
ಶಿವಮೊಗ್ಗ: ಬಿಹಾರ ಚುನಾವಣೆ ಫಲಿತಾಂಶಕ್ಕೂ ನವದೆಹಲಿ ಕೆಂಪುಕೋಟೆ ಬಳಿ ಕಾರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ(Bomb explosion)ಕ್ಕೂ ಲಿಂಕ್ ಮಾಡುತ್ತಿರುವುದು ಮೂರ್ಖತನದ ಪರಮಾವಧಿ. ಅಷ್ಟೆ ಅಲ್ಲ, ಅದು ಕೂಡ ದೇಶ ದ್ರೋಹದ ಕೆಲಸವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(vijayendra)ಕಿಡಿಕಾರಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ಸಂಭವಿಸಿದ ಸ್ಫೋಟವು ಭಯೋತ್ಪಾದನೆ ಕೃತ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದೇ ಧ್ವನಿಯಲ್ಲಿ ಅದನ್ನು ಖಂಡಿಸಬೇಕಿದೆ ಎಂದರು.
ಭಯೋತ್ಪಾದನೆ ಕೃತ್ಯಗಳ ವಿರುದ್ಧ ದೇಶದ ಪರವಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಿತ್ತು. ದುರಂತವೆಂದರೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಈ ಕ್ಷಣದವರೆಗೂ ಕೃತ್ಯದ ಬಗ್ಗೆ ಚಕಾರ ಎತ್ತಿಲ್ಲ. ಇನ್ನೂ ಕಾಂಗ್ರೆಸ್ ನಾಯಕರು ಮನಬಂದಂತೆ ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೇನಾ ಭವವ, ವಾಯುಪಡೆ ಕಚೇರಿ, ಸಂಸತ್ ಭವನದ ಕಚೇರಿ, ಕೆಂಪುಕೋಟೆ, ಬಿಜೆಪಿ ಕಚೇರಿ ಸೇರಿದಂತೆ ಹಲವೆಡೆ ಸ್ಫೋಟಿಸುವ ಸಂಚು ಬಯಲಾಗಿದೆ. ದೇಶ ಇಂತಹ ಸಂಕಷ್ಟದ ಸಂದರ್ಭಗಳನ್ನು ಎದುರಿಸುವ ಸಂಬಂಧ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಚಿಂತನೆ ಮಾಡಬೇಕಾಗುತ್ತದೆ ಎಂದು ಮನವಿ ಮಾಡಿದರು.
ತೆರೆಯಬೇಕಿತ್ತು ಬಳೆ ಕಾರ್ಖಾನೆ: ಬಾಂಬ್ ಸ್ಫೋಟ ತಡೆಯುವಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವೈಫಲ್ಯ ಅನುಭವಿಸಿದ್ದಾರೆಂದು ಕಾಂಗ್ರೆಸ್ ನಾಯಕರು ಬಳೆಗಳನ್ನು ಅಂಚೆ ಮೂಲಕ ಕಳುಹಿಸಿ ಪ್ರತಿಭಟಿಸಿದ್ದಾರೆ. ಸ್ವಾತಂತ್ರೃ ನಂತರದಲ್ಲಿ ಏನೆಲ್ಲ ಘಟನೆಗಳು ನಡೆದಿವೆ. ಎಷ್ಟೆಲ್ಲ ಅಮಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆಗ ಆಡಳಿತ ನಡೆಸಿದ ಕಾಂಗ್ರೆಸ್ ನಾಯಕರಿಗೆ ಎಷ್ಟು ಬಾರಿ ಬಳೆ ಕಳುಹಿಸಬೇಕಿತ್ತು. ಬಳೆ ಕಾರ್ಖಾನೆಯನ್ನೇ ತೆರೆಯಬೇಕಾಗಿತ್ತು ಎಂದು  ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು. ಇಂತಹ ಘಟನೆಗಳು ಸಂಭವಿಸಿದಾಗ ಕೇಂದ್ರ ಸರ್ಕಾರ, ಪ್ರಧಾನಿ, ಗೃಹ ಸಚಿವರಿಗೆ ಬಲ ಕೊಡಬೇಕೋ ವಿನಃ  ದೇಶದ್ರೋಹದ ಹೇಳಿಕೆಗಳನ್ನು ನೀಡುವ ಮೂಲಕ ಕೃತ್ಯಗಳಿಗೆ ಬೆಂಬಲ ಕೊಡಬಾರದು. ಸ್ಫೋಟದಲ್ಲಿ ವೈದ್ಯರು  ಪಾಲ್ಗೊಂಡಿರುವುದು ಗಂಭೀರವಾದ ಸಂಗತಿ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net