ರೇಡಿಯೋ ಆಲಿಸಲು ಪಾರ್ಕ್‌ಗಳಲ್ಲಿ ಟ್ರಾನ್ಸ್‌ಮಿಷನ್ ಅಳವಡಿಕೆ I radio park
murugan
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿವಮೊಗ್ಗದಲ್ಲಿ ಪೈಲಟ್ ಪ್ರಾಜೆಕ್ಟ್
ಕೇಂದ್ರ ಸಚಿವ ಎಲ್.ಮುರುಗನ್ ಮಾಹಿತಿ
ಯಶಸ್ವಿಯಾದರೆ ರಾಷ್ಟ್ರವ್ಯಾಪಿ ಅಳವಡಿಕೆ
ಶಿವಮೊಗ್ಗ: ಪೈಲಟ್ ಯೋಜನೆಯಾಗಿ ಶಿವಮೊಗ್ಗದ ಎಲ್ಲ ಪಾರ್ಕ್ (park) ಗಳಲ್ಲಿ ರೇಡಿಯೋ ಕಾರ್ಯಕ್ರಮ ಆಲಿಸಲು ಉಪಕರಣ (instrument) ಅಳವಡಿಸಲಾಗುವುದು. ಇದು ಯಶಸ್ವಿಯಾದರೆ ಈ ಯೋಜನೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಲಾಗುವುದು ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ (minister) ಎಲ್.ಮುರುಗನ್ ತಿಳಿಸಿದರು.
ವಿದ್ಯಾನಗರದ ಭದ್ರಾವತಿ ಆಕಾಶವಾಣಿಗೆ ನೂತನವಾಗಿ ಅಳವಡಿಸಲಾದ 10 ಕಿಲೋವಾಟ್ ಸಾಮರ್ಥ್ಯದ ಎಫ್‌ಎಂ ಟ್ರಾನ್ಸ್‌ಮೀಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪಾರ್ಕ್‌ಗಳಲ್ಲೂ ಎಫ್‌ಎಂ ಕಾರ್ಯಕ್ರಮ ಕೇಳುವ ವ್ಯವಸ್ಥೆಯಾಗಬೇಕೆಂಬ ಬಗ್ಗೆ ಇಲ್ಲಿನ ಶಾಸಕ ಎಸ್.ಎನ್.ಚನ್ನಬಸಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಬೇಡಿಕೆಯಂತೆ ಶಿವಮೊಗ್ಗದ ಪಾರ್ಕ್‌ಗಳಲ್ಲಿ ಸಾರ್ವಜನಿಕರು ರೇಡಿಯೊ ಕಾರ್ಯಕ್ರಮ ಆಲಿಸಲು ಟ್ರಾನ್ಸ್‌ಮಿಷನ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಇಂದು ಆಕಾಶವಾಣಿ ಕೇಂದ್ರಗಳ ಮೂಲಕ ರೇಡಿಯೋ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ದೇಶದ ಶೇ.92 ಭಾಗವನ್ನು ತಲುಪುತ್ತಿದೆ. ಅತಿ ಹೆಚ್ಚು ಜನರು ರೇಡಿಯೋ ಕಾರ್ಯಕ್ರಮ ಆಲಿಸುತ್ತಿದ್ದಾರೆ. ರೇಡಿಯೋ ಶಕ್ತಿಯುತ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮ. ನೈಜ, ಸತ್ಯ ಮತ್ತು ಸಮರ್ಪಕವಾದ ಸುದ್ದಿ, ವಿಷಯಗಳನ್ನು ನೀಡುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದೆ. ಸ್ಥಳೀಯ ಕಲಾವಿದರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
23 ಭಾಷೆಗಳು ಮತ್ತು 182 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ, ಗಡಿನಾಡು, ಗುಡ್ಡಗಾಡು, ಮತ್ತು ದೂರದ ಪ್ರದೇಶಗಳನ್ನು ತಲುಪುತ್ತಿದೆ. ಎಲ್ಲ ವರ್ಗ, ವಯೋಮಾನ ಹಾಗೂ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತವೆ ಎಂದು ಹೇಳಿದರು.
ಈಗ ಆಕಾಶವಾಣಿ ಪಾಡ್‌ಕಾಸ್ಟ್ ಆರಂಭವಾಗಿದೆ. ದೇಶದಲ್ಲಿ 550 ಸಮುದಾಯ ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಲೋಕಾರ್ಪಣೆಯಾದ ಭದ್ರಾವತಿ ಆಕಾಶವಾಣಿಯ 10 ಕಿಲೋವಾಟ್ ಸಾಮರ್ಥ್ಯದ ಎಫ್‌ಎಂ ಟ್ರಾನ್ಸ್‌ಮೀಟರ್ 3,500 ಚದರ ಕಿಮೀ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲು ಸಹಾಯಕವಾಗಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಪ್ರಸಾರ ಭಾರತಿ ಮಹಾನಿರ್ದೇಶಕ ರಾಜೇಂದ್ರಕುಮಾರ್ ಜೈನ್ ಇದ್ದರು.