ನ್ಯಾಯದ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಗೆ ಅನ್ಯಾಯ I injustice shivamogga
ಕೆ.ವಿ.ವಸಂತಕುಮಾರ್ ನಾಗರಿಕ ಹಿತರಕ್ಞಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಹೇಳಿಕೆ
ಮಂಗಳೂರಿರಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಿರೋಧ
ಶಿವಮೊಗ್ಗ: ಹೈಕೋರ್ಟ್ (high court) ಸಂಚಾರಿ ಪೀಠ (bench) ವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಕ್ರಮ ಕೈಗೊಂಡಿದ್ದಾರೆ. ಇದರಿಂದ ಶಿವಮೊಗ್ಗ (shivamogga) ಜಿಲ್ಲೆಗೆ ಅನ್ಯಾಯವಾಗಲಿದೆ. ಮೇಲಾಗಿ ಶಿವಮೊಗ್ಗ ಜಿಲ್ಲೆಯ ಹೈಕೋರ್ಟ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಮಂಗಳೂರಿಗೆ ವರ್ಗಾಯಿಸಲು ನಮ್ಮ ವಿರೋಧವಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ ಕುಮಾರ್ ಹೇಳಿದರು.
ನ್ಯಾಯದ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಜನತೆಗೆ ದೊಡ್ಡ ಅನ್ಯಾಯವಾಗಿದೆ. ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವುದು ಮತ್ತು ಶಿವಮೊಗ್ಗ ಜಿಲ್ಲೆಯ ಹೈಕೋರ್ಟ್ ದಾವೆಗಳನ್ನು ಮಂಗಳೂರಿಗೆ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಶಿವಮೊಗ್ಗ ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಒಕ್ಕೂಟದ ಬೆಂಬಲವಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೈಕೋರ್ಟ್‌ನಲ್ಲಿ ಬಾಕಿ ಇರುವ ಶಿವಮೊಗ್ಗ ಜಿಲ್ಲೆಯ ಪ್ರಕರಣಗಳು ಬಹುತೇಕ ಮಂಗಳೂರಿನ ಪ್ರಕರಣಗಳಿಗೆ ಸಮಾನವಾಗಿವೆ. ಶಿವಮೊಗ್ಗ ಕರ್ನಾಟಕದ ಮಧ್ಯಭಾಗದಲ್ಲಿ ಇರುವುದರಿಂದ ಸುತ್ತಮುತ್ತಲಿನ ಯಾವುದೇ ಜಿಲ್ಲಾ ಕೇಂದ್ರದಿಂದ ಶಿವಮೊಗ್ಗಕ್ಕೆ ರಸ್ತೆ ಮೂಲಕ ಪ್ರಯಾಣಿಸಲು ಎರಡು ತಾಸಿಗಿಂತ ಹೆಚ್ಚು ಸಮಯ ಬೇಕಿಲ್ಲ. ಹೀಗಾಗಿ ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗದಿಂದ ಮಂಗಳೂರಿಗೆ ಪ್ರಯಾಣಿಸಲು ನಮಗೆ ಕೇವಲ ರಸ್ತೆ ಮಾರ್ಗ ಮಾತ್ರವಿದೆ. ಮಿನಿಬಸ್‌ನಲ್ಲಿ ಐದು ತಾಸು ಪ್ರಯಾಣಿಸಬೇಕು. ಮೇಲಾಗಿ ಅದು ಘಾಟಿ ಮಾರ್ಗವಾಗಿರುವುದರಿಂದ ಪ್ರಯಾಣವೂ ಪ್ರಯಾಸದಾಯಕ. ಶಿವಮೊಗ್ಗದಿಂದ ಬೆಂಗಳೂರಿಗೆ ಸಂಪರ್ಕ ಸೌಲಭ್ಯ ಅತ್ಯುತ್ತಮವಾಗಿದೆ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಮುಖರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಜನಮೇಜಿರಾವ್, ಎಸ್.ಬಿ.ಅಶೋಕ್‌ಕುಮಾರ್, ನಾಗರಾಜ್ ಶೆಟ್ಟರ್, ಸುದ್ದಿಗೋಷ್ಠಿಯಲ್ಲಿದ್ದರು.
ಅಹವಾಲು ಸ್ವೀಕರಿಸಬೇಕಿತ್ತು
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಪ್ರಸ್ತಾವನೆಗೂ ಮುನ್ನ ಮಧ್ಯ ಕರ್ನಾಟಕ ಭಾಗದವರ ಹಾಗೂ ಶಿವಮೊಗ್ಗ ಜನರಿಂದ ಅಹವಾಲು ಸ್ವೀಕರಿಸಬೇಕಿತ್ತು. ಯಾವುದೇ ವರದಿಯನ್ನು ಕೇಳಿಲ್ಲ. ಮಂಗಳೂರಿನಲ್ಲಿ ಪೀಠ ಸ್ಥಾಪನೆ ಸಂಬಂಧ ಈಗಾಗಲೇ ಬಹಳಷ್ಟು ಪ್ರಗತಿಯಾಗಿದೆ. ಶಿವಮೊಗ್ಗದ ಜನ, ಜನಪ್ರತಿನಿಧಿಗಳ ಹೋರಾಟ ತೀವ್ರವಾಗಬೇಕು. ಮಂಗಳೂರಿಗೆ ಹೈಕೋರ್ಟ್ ಪೀಠ ಸ್ಥಾಪನೆಯನ್ನು ನಾವು ಧಿಕ್ಕರಿಸುತ್ತೇವೆ. ಹೈಕೋರ್ಟ್ ಪೀಠ ಸ್ಥಾಪನೆಗೆ ಹತ್ತಾರು ಮಾನದಂಡಗಳಿವೆ. ಯಾವ ಕಾರಣಕ್ಕೂ ಸಾರ್ವಜನಿಕ ಅಹವಾಲು ಸ್ವೀಕರಿಸದೆ ಅಧಿಸೂಚನೆ ಹೊರಡಿಸಬಾರದು ಎಂದು ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ಆಗ್ರಹಿಸಿದರು.
"
ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯ ಬದಿಗಿಟ್ಟು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವರಿಕೆ ಮಾಡಿ, ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗುವಂತೆ ನೋಡಿಕೊಳ್ಳಬೇಕು.
— ಕೆ.ವಿ.ವಸಂತಕುಮಾರ್ ನಾಗರಿಕ ಹಿತರಕ್ಞಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ.