ಸರ್ಕಾರದಿಂದ ಪರಿಶಿಷ್ಟ ಪಂಗಡಗಳಿಗೆ ಅನ್ಯಾಯ I government schedule tribe

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಖಂಡಿಸಿ ಜೆಡಿಎಸ್ ಎಸ್‌ಟಿ ಘಟಕದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಎಚ್.ಆರ್.ಹನುಮಂತಪ್ಪ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಶಾರದಾ ಪೂರ‌್ಯಾನಾಯ್ಕ, ಕೆ.ಬಿ.ಪ್ರಸನ್ನಕುಮಾರ್, ಶಾರದಾ ಅಪ್ಪಾಜಿಗೌಡ, ಕೆ.ಎನ್.ರಾಮಕೃಷ್ಣ, ಕಾಂತರಾಜ್ ಸೋಮಿನಕೊಪ್ಪ, ಗೀತಾ ಸತೀಶ್, ಸುಧಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಖಂಡಿಸಿ ಜೆಡಿಎಸ್ ಎಸ್‌ಟಿ ಘಟಕದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಎಚ್.ಆರ್.ಹನುಮಂತಪ್ಪ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಶಾರದಾ ಪೂರ‌್ಯಾನಾಯ್ಕ, ಕೆ.ಬಿ.ಪ್ರಸನ್ನಕುಮಾರ್, ಶಾರದಾ ಅಪ್ಪಾಜಿಗೌಡ, ಕೆ.ಎನ್.ರಾಮಕೃಷ್ಣ, ಕಾಂತರಾಜ್ ಸೋಮಿನಕೊಪ್ಪ, ಗೀತಾ ಸತೀಶ್, ಸುಧಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇನ್ನೂ ವಾಪಸಾಗದ ವಾಲ್ಮೀಕಿ ನಿಗಮದ ಹಣ
  • ಜೆಡಿಎಸ್ ಎಸ್ಟಿ ಘಟಕದಿಂದ ಪ್ರತಿಭಟನೆ
  • ಶಾಸಕಿ ಶಾರದಾ ಪೂರ‌್ಯಾನಾಯ್ಕ ನೇತೃತ್ವ
  • ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ
ಶಿವಮೊಗ್ಗ: ಮಹರ್ಷಿ ವಾಲ್ಮೀಕಿ (valmiki) ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ, ಅನುದಾನ ದುರ್ಬಳಕೆ ಖಂಡಿಸಿ ಹಾಗೂ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಜಿಲ್ಲಾ ಜೆಡಿಎಸ್ (jds) ಎಸ್ಟಿ ಘಟಕದಿಂದ ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಲಾಯಿತು. ಶಾಸಕಿ ಶಾರದಾ ಪೂರ‌್ಯಾನಾಯ್ಕ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಲಾಯಿತು.
ಪರಿಶಿಷ್ಟ ಪಂಗಡಗಳಿಗೆ ರಾಜ್ಯ ಸರ್ಕಾರ ನಿರಂತರವಾಗಿ ದ್ರೋಹ ಎಸಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ 187 ಕೋಟಿ ರೂ. ಹಗರಣವು ದೇಶಾದ್ಯಂತ ಸುದ್ದಿಯಾಗಿದ್ದು, ಸಿಬಿಐ ತನಿಖೆ ನಡೆಯುತ್ತಿದೆ. ಲೂಟಿಯಾದ ಹಣ ಇನ್ನೂ ವಾಪಸ್ಸಾಗಿಲ್ಲ. ಸರ್ಕಾರವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ನಿಗಮಕ್ಕೆ ಸರಿಯಾಗಿ ಅನುದಾನ ನೀಡದೆ, ಬಡವರಿಗೆ ಬಳಕೆಯಾಗಬೇಕಿದ್ದ ಹಣವನ್ನು ಬೇರೆಯವರ ಖಾತೆಗಳಿಗೆ ವರ್ಗಾಯಿಸಿದೆ. ಈ ಬಗ್ಗೆ ಪ್ರಶ್ನಿಸಿದರೂ ಉತ್ತರ ಸಿಕ್ಕಿಲ್ಲ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕ ಆರೋಪಿಸಿದರು.
ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ಎಚ್.ಆರ್.ಹನುಮಂತಪ್ಪ ಮಾತನಾಡಿ, ಪರಿಶಿಷ್ಟ ಪಂಗಡದ ಪೌಷ್ಟಿಕ ಆಹಾರ ಯೋಜನೆಯ 120 ಕೋಟಿ ರೂ. ಟೆಂಡರ್‌ನಲ್ಲಿ ಬಹುಕೋಟಿ ದುರ್ಬಳಕೆಯಾಗಿದೆ. ಬಡವರ ಅನ್ನಕ್ಕೆ ಕೈಹಾಕಿದ ಈ ಹಗರಣದ ತನಿಖೆ ಆಗಬೇಕು. ಕಳೆದ ಎರಡು ವರ್ಷಗಳಿಂದ ಶೇ.90ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ ಎಂದು ದೂರಿದರು.
ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು. 187 ಕೋಟಿ ರೂ. ಹಗರಣ ಹಾಗೂ 120 ಕೋಟಿ ರೂ. ಪೌಷ್ಟಿಕ ಆಹಾರ ಯೋಜನೆ ಹಗರಣದ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ಲೂಟಿಯಾದ ಹಣವನ್ನು ವಸೂಲಿ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಪೂರ್ಣಾವಧಿ ಅಧ್ಯಕ್ಷರನ್ನು ನೇಮಿಸಿ, ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷೆ ಶಾರದಾ ಅಪ್ಪಾಜಿಗೌಡ, ಜಿಲ್ಲಾ ಆಧ್ಯಕ್ಷ ಕೆ.ಎನ್.ರಾಮಕೃಷ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ದಾದಾಪೀರ್, ತ್ಯಾಗರಾಜ್, ಮಧು ಕುಮಾರ್, ಪುರುಷೋತ್ತಮ್, ಕಾಂತರಾಜ್ ಸೋಮಿನಕೊಪ್ಪ, ಬಸವರಾಜು, ನರಸಿಂಹ ಗಂಧದಮನೆ, ಎಚ್.ಎಂ.ಸಂಗಯ್ಯ, ಸುಧಾ, ಶಿಲ್ಪಾ, ಸುನೀತಾ, ಸತ್ಯವತಿ, ವಸಂತ, ಶ್ರುತಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
"

ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಶೇ.7ರಷ್ಟು ಮೀಸಲಾತಿಯನ್ನು 9ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಹೈಕೋರ್ಟ್ ತಡೆಯಾಜ್ಞೆ ತೆರವಿಗೆ ಕ್ರಮ ಕೈಗೊಳ್ಳಬೇಕು. ನಿಗಮ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.

— ಕೆ.ಬಿ.ಪ್ರಸನ್ನಕುಮಾರ್ ಜೆಡಿಎಸ್ ರಾಜ್ಯ ಉಪಾಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net