ಶಿವಮೊಗ್ಗ ಜಿಲ್ಲೆಯ ಜಲಾಶಯಗಳಿಗೆ ಒಳಹರಿವು ಹೆಚ್ಚಳ I shivamogga district dams

ತೀವ್ರ ಮಳೆಗೆ ಶಿವಮೊಗ್ಗದ ನ್ಯೂಮಂಡ್ಲಿ ಪ್ರದೇಶದಲ್ಲಿ ಮನೆಯೊಂದರ ಗೋಡೆ ಸಂಪೂರ್ಣ ಕುಸಿದಿರುವುದು.
ತೀವ್ರ ಮಳೆಗೆ ಶಿವಮೊಗ್ಗದ ನ್ಯೂಮಂಡ್ಲಿ ಪ್ರದೇಶದಲ್ಲಿ ಮನೆಯೊಂದರ ಗೋಡೆ ಸಂಪೂರ್ಣ ಕುಸಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಮುಂದುವರಿದ ಮುಂಗಾರು ಅಬ್ಬರ
  • ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕಿನಲ್ಲಿ ಎಡೆಬಿಡದೆ ಮಳೆ
  • ಲಿಂಗನಮಕ್ಕಿಗೆ ಮೂರು ಅಡಿ ನೀರು
  • 140 ಅಡಿ ತಲುಪಿದ ಭದ್ರಾ ಜಲಾಶಯದ ಮಟ್ಟ
ಶಿವಮೊಗ್ಗ : ಜಿಲ್ಲೆಯಲ್ಲಿ ಮುಂಗಾರು (mansoon) ಮಳೆ ಅಬ್ಬರ ಮುಂದುವರಿದಿದೆ. ಅತಿ ಹೆಚ್ಚು ಮಳೆ ಬೀಳುವ ಹುಲಿಕಲ್ (hulikal) ವ್ಯಾಪ್ತಿಯಲ್ಲಿರುವ, ಹೊಸನಗರ ತಾಲೂಕಿನ ಯಡೂರಿನಲ್ಲಿ 180 ಮಿ.ಮೀ ಹಾಗೂ ಮಾಸ್ತಿಕಟ್ಟೆ ಭಾಗದಲ್ಲಿ 152 ಮಿ.ಮೀ ಮಳೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ (leave) ಘೋಷಿಸಲಾಗಿತ್ತು.
24 ತಾಸಿನಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಮೂರು ಅಡಿ ನೀರು ಹರಿದು ಬಂದಿದ್ದು, ಮಂಗಳವಾರ ಜಲಾಶಯದ ಒಳಹರಿವಿನ ಪ್ರಮಾಣ 29 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಸಂಪೂರ್ಣ ಭರ್ತಿಯಾಗಿರುವ ತುಂಗಾ ಜಲಾಶಯದಿಂದ 46,385 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದುವರೆಗೆ ಒಂದು ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ನೀರು ತುಂಗಾ ಜಲಾಶಯದಿಂದ ನದಿಗೆ ಹರಿಬಿಡಲಾಗಿದೆ.
ಬಯಲುಸೀಮೆ ಜನರ ಜೀವನಾಡಿ ಭದ್ರಾ ಜಲಾಶಯದಲ್ಲೂ ಕ್ರಮೇಣ ಚೇತರಿಕೆ ಕಾಣುತ್ತಿದೆ. ಜಲಾಶಯದ ನೀರಿನ ಮಟ್ಟ 140 ಅಡಿ ತಲುಪಿದೆ. 8 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯಕ್ಕೆ ಹರಿದುಬರುತ್ತಿದ್ದು, ಅಚ್ಚುಕಟ್ಟುದಾರರಲ್ಲಿ ಹೊಸ ಆಶಾಭಾವನೆ ಮೂಡಿದೆ.
ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕಿನಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ಹೊಸನಗರ ತಾಲೂಕಿನ ಮಾಣಿ, ಪಿಕ್‌ಅಪ್, ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಮಾಣಿ ಪ್ರದೇಶದಲ್ಲಿ 180, ಸಾವೆಹಕ್ಲು 142, ಚಕ್ರಾ ಜಲಾನಯನ ಪ್ರದೇಶದಲ್ಲಿ 123 ಮಿ.ಮೀ ಮಳೆಯಾಗಿದೆ. 575.64 ಮೀಟರ್ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಮಾಣಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 575.64 ಮೀಟರ್‌ಗೆ ತಲುಪಿದೆ.
ಪಿಕ್‌ಅಪ್ ಜಲಾಶಯದಲ್ಲಿ 562.47 ಮೀಟರ್, ಚಕ್ರಾ ಜಲಾಶಯದಲ್ಲಿ 568.24 ಮೀಟರ್, ಸಾವೇಹಕ್ಲು ಜಲಾಶಯದಲ್ಲಿ 575.12 ಮೀಟರ್ ನೀರು ಸಂಗ್ರಹವಾಗಿದೆ. ಈ ಎಲ್ಲ ಜಲಾಶಯಗಳ ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವುದರಿಂದ ಇಂಧನ ವಲಯಕ್ಕೆ ಮುಂಗಾರು ಉತ್ತಮ ಕೊಡುಗೆ ನೀಡಿದಂತಾಗಿದೆ.
ಕತ್ತಲಲ್ಲಿ ಗ್ರಾಮಾಂತರ ಪ್ರದೇಶ
ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನ ಬಹಳಷ್ಟು ಗ್ರಾಮಗಳು ಕಳೆದ ಮೂರ‌್ನಾಲ್ಕು ದಿನಗಳಿಂದ ಕತ್ತಲಲ್ಲಿ ಉಳಿದಿವೆ. ರಭಸವಾದ ಗಾಳಿಗೆ ಅಲ್ಲಲ್ಲಿ ಮರಗಳು ಉರುಳಿಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿವೆ. ಹೆಚ್ಚು ಮಳೆ ಬೀಳುತ್ತಿರುವುದರಿಂದ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ವ್ಯವಸ್ಥೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇನ್ನೊಂದೆಡೆ ಮೊಬೈಲ್ ಸಿಗ್ನಲ್ ಕೂಡಾ ಇಲ್ಲದಂತಾಗಿದೆ. ಹೀಗಾಗಿ ಬಹುತೇಕ ಹಳ್ಳಿಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿವೆ.
ನ್ಯೂಮಂಡ್ಲಿಯಲ್ಲಿ ಮನೆ ಕುಸಿತ
ವ್ಯಾಪಕ ಮಳೆ ಪರಿಣಾಮ ಶಿವಮೊಗ್ಗ ನಗರದ ನ್ಯೂಮಂಡ್ಲಿಯಲ್ಲಿ ಮನೆಯೊಂದು ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಮನೆಯಲ್ಲಿದ್ದವರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮನೆ ಕುಸಿತದಿಂದ ಉಂಟಾಗಿರುವ ನಷ್ಟದ ಅಂದಾಜು ಮಾಡಿ ತ್ವರಿತವಾಗಿ ಪರಿಹಾರ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net