ಅಣು ವಿದ್ಯುತ್ ಸ್ಥಾವರಕ್ಕೆ ಪರೋಕ್ಷ ಸಮ್ಮತಿ I nuclear power plant
ಕೆ.ಎಸ್.ಈಶ್ವರಪ್ಪ , ಮಾಜಿ ಡಿಸಿಎಂ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾಡಳಿತದಿಂದ ಬೇಜವಾಬ್ದಾರಿ ನಡೆ
ಮಾಜಿ ಡಿಸಿಎಂ ಈಶ್ವರಪ್ಪ ಆಕ್ರೋಶ
ಶಿವಮೊಗ್ಗ: ಸಾಗರ ತಾಲೂಕು ಬೇಸೂರು ಗ್ರಾಮದಲ್ಲಿ ಅಣು (nuclear) ವಿದ್ಯುತ್ ಸ್ಥಾವರ ಸ್ಥಾಪಿಸುವುದನ್ನು ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗ ವಿರೋಧಿಸಿವೆ. ಪರಿಸರಕ್ಕೆ ತೀವ್ರ ಮಾರಕ ಹಾಗೂ ಜನಜೀವನವನ್ನು ಅಪಾಯ (danger) ಕ್ಕೆ ತಳ್ಳುವ ಇಂತಹ ಯೋಜನೆ (scheme) ಗೆ ಜಿಲ್ಲೆಯಲ್ಲಿ ಜಾಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮಘಟ್ಟದ ಈ ಪ್ರದೇಶ ಬೃಹತ್ ಯೋಜನೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಹೊಂದಿಲ್ಲ. ಚಕ್ರಾ, ವಾರಾಹಿ, ಲಿಂಗನಮಕ್ಕಿ, ಹಿರೇಭಾಸ್ಕರ, ಮಡೇನೂರು, ಸಾವೇಹಕ್ಲು, ಮಾಣಿ ಜಲಾಶಯದಂತಹ ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡಿವೆ. ಈಗ ಅಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಭೂಮಿ ಲಭ್ಯವಿದೆ ಎಂದು ಜಿಲ್ಲಾಡಳಿತ ಪರೋಕ್ಷವಾಗಿ ಸಮ್ಮತಿಸಿರುವುದು ಬೇಜವಾಬ್ದಾರಿ ನಡೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಫೆ.6ರಂದು ಎನ್‌ಟಿಪಿಸಿ ಸಂಸ್ಥೆಯ ನಿರ್ದೇಶನದಂತೆ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಕರೆದು ಅಣು ವಿದ್ಯುತ್ ಸ್ಥಾವರನ್ನು ಸ್ಥಾಪಿಸಲು ಸಂಭಾವ್ಯ ಪ್ರದೇಶಗಳ ಸೂಕ್ತತೆ ಕುರಿತು ಪ್ರಾಥಮಿಕ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಅಣು ವಿದ್ಯುತ್ ಸ್ಥಾವರ ಯೋಜನೆಗೆ ರಾಯಚೂರು, ವಿಜಯನಗರ, ಕೊಪ್ಪಳ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಮ್ಮಲ್ಲಿ ಭೂಮಿ ಇಲ್ಲ. ಮಾಲಿನ್ಯ ಉಂಟು ಮಾಡುವ, ಅಣು ಸ್ಥಾವರದ ಅಣು ವಿಕೇಂದ್ರೀಕರಣದಿಂದ ಆಗುವ ಹಾನಿ ಹಾಗೂ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಬಾರದೆಂದು ಸಾರ್ವಜನಿಕರು, ಪರಿಸರವಾದಿಗಳು, ಧರಣಿ, ಮುಷ್ಕರ ನಡೆಸುತ್ತಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ ನಮ್ಮ ಜಿಲ್ಲಾಧಿಕಾರಿಗೆ ಏನಾಗಿದೆ? ಭೂಮಿ ಲಭ್ಯವಿದೆ ಎಂದು ತಿಳಿಸಿರುವುದರ ಮರ್ಮವೇನು? ಇಂತಹ ಮಾರಕ ಯೋಜನೆಗಳು ಬೇಡ ಎಂದು ಜಿಲ್ಲಾಧಿಕಾರಿ ಏಕೆ ಹೇಳುತ್ತಿಲ್ಲ? ಇಲ್ಲಿಯ ಜನ ದಂಗೆ ಏಳುವುದನ್ನು ಜಿಲ್ಲಾಧಿಕಾರಿ ಇಷ್ಟಪಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ರಜೆ ಮುಗಿಸಿ ಬಂದ ಬಳಿಕ ಅವರ ಜತೆ ಸಭೆ ಮಾಡುತ್ತೇನೆ. ಪರಿಸರಕ್ಕೆ ಮಾರಕವಲ್ಲದ ಯೋಜನೆಗಳನ್ನು ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಬೇಕೆಂದು ಸಲಹೆ ನೀಡಿದರು.
ಪರಿಸರವಾದಿಗಳಾದ ಡಾ. ಶೇಖರ್ ಗೌಳೇರ್, ಪರಿಸರ ರಮೇಶ್, ಪ್ರಕಾಶ್, ಮಹಾದೇವ ಸ್ವಾಮಿ, ಶ್ರೀಕಾಂತ್, ಎಸ್.ಬಿ.ಅಶೋಕ್‌ಕುಮಾರ್, ಹರೀಶ್ ಕಾರ್ಣಿಕ್, ವಿ.ರಾಜು, ಜನಾರ್ದನ್ ಪೈ, ಸುಬ್ರಹ್ಮಣ್ಯ, ನವ್ಯಶ್ರೀ ನಾಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.
"
ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ ಎಂದು ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್ ಹೇಳಿರುವುದು ಜನರ ಮೂಗಿಗೆ ತುಪ್ಪ ಸವರುವ ಕೆಲಸ. ಅವರ ಹೇಳಿಕೆ ನಂಬಿಕೆಗೆ ಅರ್ಹವಲ್ಲ. ಪಶ್ಚಿಮಘಟ್ಟದ ಸರ್ವನಾಶಕ್ಕೆ ಕಾರಣವಾಗುವ ಈ ಯೋಜನೆ ಅತ್ಯಂತ ಅವ್ಯವಹಾರಿಕವಾದುದು. ಇದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ.