ಶಿಕಾರಿಪುರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಧ್ವಜವಂದನೆ ಸ್ವೀಕರಿಸಿದರು. ತಹಸೀಲ್ದಾರ್ ಮಂಜುಳಾ ಭಜಂತ್ರಿ, ಡಿವೈಎಸ್ಪಿ ಕೇಶವ್ ಇತರರಿದ್ದರು.
Published on:
Copied
Follow Us
ಶಿಕಾರಿಪುರ: ಜಗತ್ತಿನ ಶ್ರೇಷ್ಠ ಸಂವಿಧಾನದ ವಾರಸುದಾರರಾದ ನಾವು ಸಂವಿಧಾನದ ಆಶಯಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಗಣರಾಜ್ಯೋತ್ಸವದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಡೀ ದೇಶವು ಅತ್ಯಂತ ಸಡಗರ ಮತ್ತು ದೇಶಭಕ್ತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಇದು ಪ್ರತಿ ಭಾರತೀಯನೂ ಹೆಮ್ಮೆಪಡುವ ಐತಿಹಾಸಿಕ ದಿನ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಮೇಲೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮಸ್ಥಳ ಮತ್ತು ವಿದೇಶದಲ್ಲಿ ಅವರು ಅಭ್ಯಾಸ ಮಾಡಿದ ಸ್ಥಳವನ್ನು ಅಭಿವೃದ್ಧಿಪಡಿಸಿದರು. ತಾಲೂಕಿನ ಚುರ್ಚಿಗುಂಡಿ ಮುರಾರ್ಜಿ ವಸತಿ ಶಾಲೆಯ ಇಬ್ಬರು ಮಕ್ಕಳು ವಿಜ್ಞಾನ ಮಾದರಿ ತಯಾರಿಕೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ಅವರನ್ನು ಗುರ್ತಿಸಿ ಕೇಂದ್ರ ಸರ್ಕಾರ ಅವರಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ತಹಸೀಲ್ದಾರ್ ಮಂಜುಳಾ ಭಜಂತ್ರಿ ಮಾತನಾಡಿ, ಸಂವಿಧಾನವು 1950ರ ಜ.26ರಂದು ಜಾರಿಗೆ ಬಂದಿತು. ಅಂದಿನಿಂದ ಭಾರತವು ಬ್ರಿಟಿಷ್ ರಾಜಪ್ರಭುತ್ವದ ಅಧೀನದಿಂದ ಸಂಪೂರ್ಣ ಮುಕ್ತವಾಗಿ ಗಣರಾಜ್ಯವಾಗಿ ಹೊರಹೊಮ್ಮಿತು ಎಂದು ತಿಳಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹುಲ್ಮಾರ್ ಮಹೇಶ್, ಇಒ ನಾಗರಾಜ್, ಡಿವೈಎಸ್ಪಿ ಕೇಶವ್, ಪುರಸಭೆ ಮುಖ್ಯಾಧಿಕಾರಿ ಭರತ್, ಬಿಇಒ ಲೋಕೇಶ್ವರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಕೇಶ್ವರ್ ಇತರರಿದ್ದರು.