ಶಿಕಾರಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಬಾಡ್ಮಿಂಟನ್, ಟೇಬಲ್ ಟೆನಿಸ್ ಪಂದ್ಯಾವಳಿಯನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಡಾ. ಚನ್ನಪ್ಪ, ಡಾ. ಸೌಮ್ಯಾ, ಡಾ. ಹರೀಶ್, ಡಾ. ರಾಕೇಶ್ ಪಟ್ಟಣ ಇತರರಿದ್ದರು.
ಶಿಕಾರಿಪುರ: ಕ್ರೀಡೆಗಳು ಸ್ಪರ್ಧಾತ್ಮಕ ಭಾವನೆ ಸೃಜಿಸುವುದಲ್ಲದೇ ಸದೃಢ ಆರೋಗ್ಯಕ್ಕೂ ಪೂರಕವಾಗಿವೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಅಂತರಕಾಲೇಜು ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಗ್ರಾಮಾಂತರ ಭಾಗದ ಕ್ರೀಡಾಪಟುಗಳು ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಪಠ್ಯದ ಜತೆಗೆ ಕ್ರೀಡೆಗೂ ಪಾಲಕರು ಮತ್ತು ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು ಎಂದರು.
ದೈತ್ಯ ಕ್ರೀಡೆಗಳ ನಡುವೆ ಸಣ್ಣ ಸಣ್ಣ ಕ್ರೀಡೆಗಳು, ಜಾನಪದ ಕ್ರೀಡೆಗಳು ವಿನಾಶದ ಅಂಚಿನಲ್ಲಿವೆ. ಎಷ್ಟೋ ಜಾನಪದ ಕ್ರೀಡೆಗಳು ಈಗಾಗಲೇ ತೆರೆಮರೆ ಸೇರಿವೆ. ಇರುವ ಕ್ರೀಡೆಗಳು ನಶಿಸಿಹೋಗದ ಹಾಗೆ ಕಾಪಾಡಿಕೊಳ್ಳಬೇಕು. ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್‌ನಂತಹ ಆಟಗಳು ಆಟಗಾರರ ಬುದ್ಧಿಮತ್ತೆ ಚುರುಕುಗೊಳಿಸುತ್ತವೆ. ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯ. ಪ್ರತಿ ಸ್ಪರ್ಧೆಗಳೂ ನಮಗೆ ಸವಾಲೊಡ್ಡುತ್ತವೆ. ಆ ಸವಾಲುಗಳನ್ನು ಮೆಟ್ಟಿ ಗೆದ್ದು ಬರಬೇಕು. ಪರಿಶ್ರಮ, ಸಂಕಲ್ಪದಿಂದ ಮಾತ್ರ ಗೆಲುವು ದೊರಕುತ್ತದೆ. ಪ್ರತಿ ಗೆಲುವು ನಮ್ಮ ಮುಂದಿನ ಹೆಜ್ಜೆಗೆ ಹಸಿರು ನಿಶಾನೆ ತೋರಿಸುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಚನ್ನಪ್ಪ, ಡಾ. ಸೌಮ್ಯಾ, ಡಾ. ಹರೀಶ್, ಡಾ. ರಾಕೇಶ್ ಪಟ್ಟಣ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಸಿ.ವೇಣುಗೋಪಾಲ್, ಪುರಸಭೆ ಸದಸ್ಯ ಪಾಲಾಕ್ಷಪ್ಪ, ವಿರೂಪಾಕ್ಷ, ನಾರಾಯಣ, ಡಾ. ಪಾಂಡುರಂಗ, ಕೃಷ್ಣೋಜಿ ರಾವ್ ಇದ್ದರು.