ನೀರಿನ ತೊಂದರೆಯಾದರೆ ತೆರಿಗೆ ಹಣ ಬಳಸಿ | meeting

ಶಿಕಾರಿಪುರ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ರಾಜಸ್ವ  ನಿರೀಕ್ಷಕರಿಗೆ ಶಾಸಕ ಬಿ.ವೈ.ವಿಜಯೇಂದ್ರ ಕ್ರೋಮ್ ಬುಕ್ ವಿತರಿಸಿದರು. ನಾಗರಾಜ್, ರವಿಕುಮಾರ್, ಪಿಡಿಒಗಳು ಇದ್ದರು.
ಶಿಕಾರಿಪುರ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ರಾಜಸ್ವ ನಿರೀಕ್ಷಕರಿಗೆ ಶಾಸಕ ಬಿ.ವೈ.ವಿಜಯೇಂದ್ರ ಕ್ರೋಮ್ ಬುಕ್ ವಿತರಿಸಿದರು. ನಾಗರಾಜ್, ರವಿಕುಮಾರ್, ಪಿಡಿಒಗಳು ಇದ್ದರು.
Published on
ಶಿಕಾರಿಪುರ: ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಆಯಾ ಪಂಚಾಯಿತಿ ಆಡಳಿತಾಧಿಕಾರಿಗಳು, ಪಿಡಿಒಗಳು ನಿರ್ವಹಿಸಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಯಾವ ಸ್ಥಳದಲ್ಲಿ ಕುಡಿಯುವ ನೀರಿನ ತೊಂದರೆ ಇದೆಯೋ ಸ್ವತಃ ಅಲ್ಲಿಗೆ ಹೋಗಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದರು.
ಬೋರ್‌ವೆಲ್ಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದರೆ, ಅಂತಹ ಕಡೆಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಿ. ತಾಲೂಕಿನ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಪುರಸಭೆ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳು, ಹಾಸ್ಟೆಲ್ಗಳು ಮತ್ತು ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಯಾವುದೇ ಒಂದು ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಗಮನ ನೀಡಬೇಕು ಎಂದು ಎಚ್ಚರಿಸಿದರು.
ರಾಜ್ಯದ ಅನ್ಯ ತಾಲೂಕುಗಳಿಗೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ಅಷ್ಟೇನೂ ನೀರಿನ ಸಮಸ್ಯೆ ಇಲ್ಲ. ಹಾಗೆಂದು ಮುಂದಿನ ಕೈಕಟ್ಟಿ ಕೂರುವಂತಿಲ್ಲ. ಸರ್ಕಾರದಿಂದ ಬರುವ ಹಣವನ್ನೇ ಕಾದು ಕುಳಿತುಕೊಳ್ಳುವುದು ಬೇಡ. ಹಣ ಬಿಡುಗಡೆ ಆಗದಿದ್ದರೆ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ತೆರಿಗೆ ಹಣದಲ್ಲಿ ಕುಡಿಯುವ ನೀರಿಗೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕಂದಾಯ ಇಲಾಖೆಯ ವಿವಿಧ ರಾಜಸ್ವ ನಿರೀಕ್ಷಕರಿಗೆ ಸರ್ಕಾರದಿಂದ ನೀಡಲ್ಪಟ್ಟ ಕ್ರೋಮ್ ಬುಕ್ ವಿತರಿಸಲಾಯಿತು. ತಾಪಂ ಇಒ ನಾಗರಾಜ್, ಉಪ ತಹಸೀಲ್ದಾರ್ ರವಿಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಹಂತದ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ಇದ್ದರು.

ಗುಣಮಟ್ಟದ ವಿದ್ಯುತ್ ಪೂರೈಸಿ

ಗ್ರಾಮಗಳಿಗೆ, ಶಾಲಾ ಕಾಲೇಜು, ಹಾಸ್ಟೆಲ್ಗಳಲ್ಲಿ ಕುಡಿಯುವ ನೀರಿಗಾಗಿ ಕೊರೆಸಿರುವ ಅನೇಕ ಕೊಳವೆಬಾವಿಗಳಿಗೆ ಮೆಸ್ಕಾಂನಿಂದ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ವಿಜಯೇಂದ್ರ ತಿಳಿಸಿದರು. ಹಾರೋಗೊಪ್ಪ ಗ್ರಾಪಂನ ಬಿ ಕ್ಯಾಂಪ್‌ನಲ್ಲಿರುವ ನಂದಿಕೆರೆಯಲ್ಲಿ ಹೂಳು ತುಂಬಿರುವ ಬಗ್ಗೆ ಪ್ರಸ್ತಾಪಿಸಿದ ಶಾಸಕ, ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ ಅನೇಕ ಕೆರೆಗಳಲ್ಲಿ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗಿದೆ. ಆದರೂ ಕೆರೆಗಳಲ್ಲಿ ಹೂಳು ತುಂಬಿ ನೀರು ನಿಲ್ಲುತ್ತಿಲ್ಲ. ಅಂತಹ ಕೆರೆಗಳನ್ನು ಗುರುತಿಸಿ ಹೂಳೆತ್ತಬೇಕು ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net