ಜಾಗ ಕೊಡದಿದ್ದರೆ ಅಣು ವಿದ್ಯುತ್ ಯೋಜನೆ ಪ್ರಸ್ತಾಪವೇ ರದ್ದು | central minister
ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಮತ್ತು ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿ ಪ್ರಮುಖರು ಸಚಿವ ಪ್ರಲ್ಹಾದ ಜೋಷಿ ಅವರಿಗೆ ಸಾಗರದಲ್ಲಿ ಮನವಿ ಸಲ್ಲಿಸಿದರು. ಬಿ.ವೈ.ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಬಸಪ್ಪ ಗೌಡ, ಅಶೋಕ್ ಭಟ್ ಇತರರಿದ್ದರು.
ಸಾಗರ: ತಾಲೂಕಿನ ಬೇಸೂರು ಸಮೀಪ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡದಂತೆ ಮತ್ತು ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸಂಚಾರ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಎರಡೂ ಹೋರಾಟ ಸಮಿತಿಯ ಪ್ರಮುಖರು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರಿಗೆ ಸಾಗರದಲ್ಲಿ ಶನಿವಾರ ಮನವಿ ಸಲ್ಲಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಅಣು ವಿದ್ಯುತ್ ಸ್ಥಾವರಕ್ಕೆ ರಾಜ್ಯ ಸರ್ಕಾರ ಜಾಗ ಕೊಡದೇ ಇದ್ದರೆ ಕೇಂದ್ರ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾಪವೇ ಇರುವುದಿಲ್ಲ. ಅಣು ವಿದ್ಯುತ್ ಸ್ಥಾವರದಿಂದ ಜಾಗತಿಕ ಮಟ್ಟದಲ್ಲಿ ಒಂದೆರಡು ಪ್ರಮಾದಗಳು ನಡೆದದ್ದು ಬಿಟ್ಟರೆ ಬೇರೇನೂ ಘಟಿಸಿಲ್ಲ. ಆದರೂ ಜನರ ಇಚ್ಛೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವುದಿಲ್ಲ. ಅಣು ವಿದ್ಯುತ್ ಸೇರಿ ಎಲ್ಲ ಯೋಜನೆ ಕೈಗೆತ್ತಿಕೊಳ್ಳುವ ಪೂರ್ವ ರಾಜ್ಯ ಸರ್ಕಾರಕ್ಕೆ ಕೇಂದ್ರ ಯೋಜನೆ ಕುರಿತು ಮಾಹಿತಿ ನೀಡುತ್ತದೆ. ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ನಂತರವಷ್ಟೇ ಬೆಂಬಲ ನೀಡುತ್ತದೆ. ಆದರೆ ಬೇಸೂರು ಯೋಜನೆಗೆ ಸಂಬಂಧಿಸಿ ಯಾವುದೇ ಅಂತಿಮ ಪರಿಶೀಲನೆ ಪ್ರಸ್ತಾಪ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದೊಮ್ಮೆ ವಿದ್ಯುತ್ ಉತ್ಪಾದನೆಯಾದರೆ ಶೇ.50 ಆಯಾ ರಾಜ್ಯಕ್ಕೆ ಹೋಗುತ್ತದೆ. ಉಳಿದ ಶೇ.50ರಷ್ಟು ಹೊರಗೆ ಸರಬರಾಜು ಆಗುತ್ತದೆ. ರಾಜ್ಯ ಸರ್ಕಾರ ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಹೇಗೆ ಕೈಗೆತ್ತಿಕೊಳ್ಳಬೇಕು ಎನ್ನುವ ನಿರ್ಣಯ ಕೈಗೊಳ್ಳಬೇಕು. ಏಕೆಂದರೆ ಭೂಮಿ ಇರುವುದು ರಾಜ್ಯ ಸರ್ಕಾರದ ಬಳಿಯೇ ಹೊರತು ಕೇಂದ್ರದ ಬಳಿಯಲ್ಲ ಎಂದರು.
ಸಂಚಾರಿ ಹೈಕೋರ್ಟ್ ಪೀಠವನ್ನು ಬೇರೆ ಜಿಲ್ಲೆಗಿಂತ ಶಿವಮೊಗ್ಗದಲ್ಲಿ ಮಾಡಲು ಸೂಕ್ತವಾಗಿದೆ ಎಂದು ಮಾಹಿತಿ ನೀಡಲಾಗಿದೆ. ಇದು ನನ್ನ ವ್ಯಾಪ್ತಿಗೆ ಬಾರದಿದ್ದರೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಜಿಲ್ಲೆಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಹಿರಿಯ ವಕೀಲ ಬಸಪ್ಪ ಗೌಡ, ಅಶೋಕ್ ಭಟ್, ರಾಘವೇಂದ್ರ. ಶ್ರೀನಾಥ್, ನಾಗರಾಜ್, ಎಂ.ಎಸ್.ಗೌಡರ್, ಸಂತೋಷ್, ಕೆ.ಎನ್.ಶ್ರೀಧರ್, ಟಿ.ಎಸ್.ರಮಣ, ಅಚ್ಚುತ್ ಇತರರಿದ್ದರು.