ರಾಜ್ಯ ಸರ್ಕಾರದಿಂದ ಎಸ್‌ಐಆರ್ ಅಕ್ರಮಕ್ಕೆ ಬೆಂಬಲ ಸಿಗುತ್ತಿರುವ ಅನುಮಾನ I sir illigal support

ಶಿವಮೊಗ್ಗದಲ್ಲಿ ರಾಷ್ಟ್ರಭಕ್ತರ ಬಳಗದ ಎಸ್‌ಐಆರ್ ಸಹಾಯವಾಣಿ ಕೇಂದ್ರವನ್ನು ವಕೀಲ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸಿದರು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಸುವರ್ಣಾ ಶಂಕರ್, ಬಾಲು, ಇ.ವಿಶ್ವಾಸ್ ಇತರರಿದ್ದರು.
ಶಿವಮೊಗ್ಗದಲ್ಲಿ ರಾಷ್ಟ್ರಭಕ್ತರ ಬಳಗದ ಎಸ್‌ಐಆರ್ ಸಹಾಯವಾಣಿ ಕೇಂದ್ರವನ್ನು ವಕೀಲ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸಿದರು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಸುವರ್ಣಾ ಶಂಕರ್, ಬಾಲು, ಇ.ವಿಶ್ವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅನಿಸಿಕೆ
  • ರಾಷ್ಟ್ರಭಕ್ತರ ಬಳಗದಿಂದ ಜಾಗೃತಿ, ಸಹಾಯವಾಣಿ ಕೇಂದ್ರ ಸ್ಥಾಪನೆ
  • ಮತದಾರರ ಪಟ್ಟಿಯ ಶುದ್ಧೀಕರಣ ಪ್ರಕ್ರಿಯೆ
ಶಿವಮೊಗ್ಗ: ಒಂದೇ ಸಮುದಾಯದ ಮತದಾರರನ್ನು ಒಂದೆಡೆ ಕೂರಿಸಿಕೊಂಡು ಬಿಎಲ್‌ಒ (blo)ಗಳನ್ನು ಕರೆಯಿಸಿ ಎಸ್‌ಐಆರ್ (sir) ಫಾರ್ಮ್ ಭರ್ತಿ ಮಾಡಿಸಿದ ಅನೇಕ ಪ್ರಕರಣಗಳು ನಡೆದಿವೆ. ರಾಜ್ಯ ಸರ್ಕಾರ (state goverment) ಇಂತಹ ಅಕ್ರಮಕ್ಕೆ ಅವಕಾಶ ನೀಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಎಸ್‌ಐಆರ್ ಅರ್ಜಿ ಭರ್ತಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸೋಮವಾರ ರಾಷ್ಟ್ರಭಕ್ತರ ಬಳಗ ಹಾಗೂ ವಿನೋಬನಗರ ಶನೈಶ್ಚರ ದೇವಾಲಯ ಸಮಿತಿಯಿಂದ ಶುಭಮಂಗಳ ಸಮುದಾಯ ಭವನದಲ್ಲಿ ಸಹಾಯವಾಣಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್‌ಐಆರ್ ರಾಜಕೀಯ ಚಟುವಟಿಕೆಯಲ್ಲ. ಅನೇಕರು ಹಲವೆಡೆ ಮತಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಇದನ್ನು ಪತ್ತೆಹಚ್ಚಿ, ಮತದಾರರ ಪಟ್ಟಿ ಶುದ್ಧೀಕರಣ ಮಾಡುವುದೇ ಎಸ್‌ಐಆರ್. ಬಿಹಾರ, ಪಶ್ಚಿಮ ಬಂಗಾಳ, ಹರಿಯಾಣ ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ಬಳಿಕ ಲಕ್ಷಾಂತರ ಬಾಂಗ್ಲಾದೇಶಿಯರು ಬಂಗಾಳ ತೊರೆದಿದ್ದನ್ನು ಗಮನಿಸಿದ್ದೇವೆ ಎಂದರು.
ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಬೇಕು. ಅವರು ಬಂದಿಲ್ಲ ಎಂದಾದರೆ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಸ್‌ಐಆರ್ ಪ್ರಕ್ರಿಯೆಗೆ ಸಹಕಾರ ನೀಡಬೇಕು. ಎಲ್ಲ ವಾರ್ಡ್‌ಗಳಲ್ಲೂ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರಿಗೆ ಎಸ್‌ಐಆರ್ ಕುರಿತು ತರಬೇತಿ ನೀಡಿದ್ದು, ಅಧಿಕೃತ ಚೀಟಿ ನೀಡಲಾಗಿದೆ ಎಂದರು.
ಜಿಪಂ ಮಾಜಿ ಸದ್ಯ ಕೆ.ಇ.ಕಾಂತೇಶ್, ಮಾಜಿ ಮೇಯರ್ ಸುವರ್ಣಾ ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಬಾಲು, ಶ್ರೀಕಾಂತ್, ವಿ.ರಾಜು, ಸ.ನಾ.ಮೂರ್ತಿ ಇತರರಿದ್ದರು.
ಅನಧಿಕೃತ ಮತದಾರರ ಪತ್ತೆ
ಜಗತ್ತಿನ ಅತಿ ದೊಡ್ಡ ಮತ್ತು ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು. ಅನಧಿಕೃತವಾಗಿ ಮತ ಚಲಾಯಿಸಿ ಯಾರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಬಾರದು ಎನ್ನುವ ಉದ್ದೇಶಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿದೆ ಎಂದು ವಕೀಲ ಎಂ.ಆರ್.ಸತ್ಯನಾರಾಯಣ ಹೇಳಿದರು. ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಐಆರ್ ಬಗ್ಗೆ ಸಾರ್ವಜನಿಕರಲ್ಲಿ ಅನೇಕ ಗೊಂದಲಗಳಿವೆ. ಗೊತ್ತಿಲ್ಲದವರು ತರಾತುರಿಯಲ್ಲಿ ಎಸ್‌ಐಆರ್ ಫಾರ್ಮ್ ಭರ್ತಿ ಮಾಡಿಕೊಟ್ಟಾಗ ಸಣ್ಣ ತಪ್ಪುಗಳಿದ್ದರೂ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ಅದಕ್ಕಾಗಿ ರಾಷ್ಟ್ರಭಕ್ತರ ಬಳಗ ಎಸ್‌ಐಆರ್ ಅರ್ಜಿಯನ್ನು ಭರ್ತಿ ಮಾಡುವ ಪ್ರಕ್ರಿಯೆಯ ಅರಿವು ಮೂಡಿಸಲು ಸಹಾಯವಾಣಿ ಆರಂಭಿಸಿದೆ ಎಂದರು. ಎಸ್‌ಐಆರ್‌ಗೆ ಇಷ್ಟೊಂದು ವಿರೋಧವೇಕೆ, ವಿರೋಧಿಸುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಎಸ್‌ಐಆರ್ ಯಾಕೆ ಮಾಡಬೇಕು ಎಂಬುದು ಅರಿವಿಗೆ ಬಂದಿದೆ. ಎಸ್‌ಐಆರ್‌ನಲ್ಲಿ ಎರಡು ಸ್ಪಷ್ಟ ಉದ್ದೇಶವಿದೆ. ಅರ್ಹ ಪ್ರಜೆಯೂ ಮತದಾನದಿಂದ ವಂಚಿತರಾಗಬಾರದು. ಯಾರು ಅನರ್ಹರಿದ್ದಾರೋ ಅವರನ್ನು ಹೊರಗಿಡಬೇಕು ಎಂಬುದು ಪ್ರಕ್ರಿಯೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
"

ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿದರೂ ಅದು ದೇಶಕ್ಕಾಗುವ ನಷ್ಟ. ಹೀಗಾಗಿ ಎಸ್‌ಐಆರ್ ಫಾರ್ಮ್ ಅನ್ನು ತಿಳಿದವರ ಬಳಿ ಮಾಹಿತಿ ಪಡೆದು ಭರ್ತಿ ಮಾಡಬೇಕು. ಹೀಗಾಗಿ ಜನರಿಗೆ ಸೂಕ್ತ ಸಲಹೆ, ಸಹಕಾರ ನೀಡಲು ಸಲಹಾ ಕೇಂದ್ರ ತೆರೆದಿದ್ದು, ಜು.29ರವರೆಗೂ ಈ ಕೇಂದ್ರ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿದೆ.

— ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net