ಪತ್ನಿಗೆ ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ್ದ ಪತಿಗೆ 4 ವರ್ಷ ಜೈಲು ಶಿಕ್ಷೆ | shimogga Court

ಶಿವಮೊಗ್ಗದ ನ್ಯಾಯಾಲಯ
ಶಿವಮೊಗ್ಗದ ನ್ಯಾಯಾಲಯ
Published on
ಶಿವಮೊಗ್ಗ: ಪತ್ನಿಗೆ ಜಾತಿ ನಿಂದನೆ(Caste abuse)ಮಾಡಿ, ಜೀವ ಬೆದರಿಕೆ ಹಾಕಿದ್ದ ಪತಿಗೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Court)ವು 4 ವರ್ಷ ಕಠಿಣ ಶಿಕ್ಷೆ ಹಾಗೂ 1.05 ಲಕ್ಷ ರೂ. ದಂಡ ವಿಧಿಸಿದೆ.
ಶಿಕಾರಿಪುರ(shikaripura) ತಾಲೂಕಿನ ಹಿತ್ತಲ ಗ್ರಾಮದ ಎಸ್.ಇ.ಚಿದಾನಂದ(43) ಶಿಕ್ಷೆಗೆ ಒಳಗಾದವ. 2020ರ ಮೇ 14ರಂದು ಹಿರಿಯರ ಸಮ್ಮುಖದಲ್ಲಿ ಗುಡ್ಡೇಕಲ್ ದೇವಸ್ಥಾನ(temple)ದಲ್ಲಿ ಚಿದಾನಂದ ಅವರನ್ನು ಮಂಜುಳಾ ಮದುವೆಯಾಗಿದ್ದರು. ಮೇ 21ರಂದು ಉಪ ನೋಂದಣಿ ಕಚೇರಿಯಲ್ಲಿ ಮದುವೆ ರಿಜಿಸ್ಟ್ರರ್ ಕೂಡ ಮಾಡಿಸಿದ್ದರು.
ಮದುವೆ ಬಳಿಕ ತನ್ನ ಮನೆಗೆ ಕರೆದುಕೊಂಡು ಹೋಗದೇ ಆಕೆಯ ಗ್ರಾಮ ಭೈರನಕೊಪ್ಪದ ಮನೆಯಲ್ಲೇ ಬಿಟ್ಟು ಹೋಗಿದ್ದರು. 2023ರ ಜ.3ರಂದು ಭೈರನಕೊಪ್ಪದ ಮನೆಗೆ ಬಂದು ಜಾತಿ ನಿಂಧನೆ ಮಾಡಿದ್ದಲ್ಲದೆ, ಜೀವ ಬೆದರಿಕೆಯನ್ನು ಹಾಕಿದ್ದು, ಈ ಬಗ್ಗೆ ಮಂಜುಳಾ ಕುಂಸಿ ಠಾಣೆಗೆ ದೂರು ನೀಡಿದ್ದರು.
ಅಂದಿನ ತನಿಖಾಧಿಕಾರಿ ಡಿವೈಎಸ್‌ಪಿ ಎಂ.ಸುರೇಶ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಕೆ.ಪಿ.ಪ್ರೀತಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿದಾನಂದಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ 1.2 ವರ್ಷ ಸಾದಾ ಶಿಕ್ಷೆ ನೀಡಿದ್ದು, ಸಂತ್ರಸ್ತೆಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ.ಓ.ಪುಷ್ಪಾ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net