ರಿಪ್ಪನ್‌ಪೇಟೆ ಬಸವೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಚನ ಪ್ರತಿಭೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಕೃಷ್ಣರಾಜು, ರವೀಂದ್ರ ಬಲ್ಲಾಳ್, ಶಶಿಕಲಾ ಇತರರಿದ್ದರು.
ರಿಪ್ಪನ್‌ಪೇಟೆ: ಸಮಾಜದ ಎಲ್ಲರೊಂದಿಗೆ ಸ್ನೇಹ, ಗೌರವದಿಂದ ದುಡಿದು ಬಾಳುವ ಸಂಸ್ಕಾರದ ಮಾನವೀಯ ಮೌಲ್ಯವನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಬುಧವಾರ ಆಯೋಜಿಸಿದ್ದ ಹೊಸನಗರ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಚನ ಪ್ರತಿಭೋತ್ಸವ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವ್ಯಕ್ತಿಯ ನಡೆ, ನುಡಿ, ನೋಟಗಳು ಸರಿಯಾಗಿ ಇರಬೇಕೆಂಬುದೇ ವಚನದ ಮೂಲತತ್ವ. ಅನ್ನ, ಅರಿವು, ಅರಿವೆ, ಆರೋಗ್ಯ ಕಾಪಾಡಿಕೊಳ್ಳಲು ಹಣ ಬೇಕು. ಅಂತಹ ಅಗತ್ಯದ ಹಣ ಸಂಪಾದನೆಗೆ ಸನ್ಮಾರ್ಗದ ದುಡಿಮೆ ಅನುಸರಿಸಿದರೆ ಮಾತ್ರ ದೇವರು ಒಪ್ಪುತ್ತಾನೆ ಎಂಬ ಸತ್ಯ ವಚನಗಳಲ್ಲಡಗಿದೆ ಎಂದು ತಿಳಿಸಿದರು.
ಸಮಾಜ ಸುಧಾರಣೆಯ ಅಮೂಲ್ಯ ತಾಳೆಗರಿ ವಚನ ಸಂಪತ್ತನ್ನು ವಚನಗಳ ಸಂರಕ್ಷಕ ಫ.ಗು ಹಳಗಟ್ಟಿ ಅವರು ಸಂರಕ್ಷಿಸಿ, ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಜಾತಿ, ಮತ, ಪಂಥ ಭೇದವಿಲ್ಲದ ಬಸವಣ್ಣ, ಅಕ್ಕಮಹಾದೇವಿ ಮೊದಲಾಗಿ ಅನೇಕ ವಚನಕಾರರ ಕೃತಿಗಳು ಇಂದಿನ ಸಮಾಜಕ್ಕೆ ದಾರಿದೀಪಗಳಾಗಿವೆ. ವಿದ್ಯಾರ್ಥಿಗಳಿಗೆ ವಚನದ ಆಸಕ್ತಿ ಮೂಡಿಸಲು ಇಂತಹ ಸ್ಪರ್ಧೆ ಅರ್ಥಪೂರ್ಣವಾಗಿದೆ. ಇಂತಹ ಪ್ರಯತ್ನಗಳು ನಿರಂತರವಾಗಲಿ ಎಂದು ಆಶಿಸಿದರು.
ರೋಟರಿ ಅಧ್ಯಕ್ಷ ಕೃಷ್ಣರಾಜು, ಕಾರ್ಯದರ್ಶಿ ರವೀಂದ್ರ ಬಲ್ಲಾಳ್, ಲಕ್ಷ್ಮಣ ಗೌಡ, ವರ್ತೇಶ್, ದಾನೇಶಪ್ಪ, ಸದಾಶಿವ, ಶಶಿಕಲಾ, ಮುಖ್ಯಶಿಕ್ಷಕ ಚಂದ್ರಪ್ಪ ಇತರರಿದ್ದರು.