ಹಲವು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಂತೆ ಅಡಿಕೆಯಲ್ಲೂ ವೈವಿಧ್ಯಮಯ ತಳಿಗಳಿವೆ. ದೀರ್ಘಕಾಲ ಫಸಲು ನೀಡುವ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಕ್ಯಾಸನೂರು ತಳಿ ಬಹುತೇಕ ಪ್ರದೇಶಗಳಿಗೆ ಹೊಂದಿಕೆಯಾಗುತ್ತದೆ. ಮಲೆನಾಡು, ಕರಾವಳಿ, ಅರೆ ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಈ ತಳಿಗಿಂತಲೂ ಹೆಚ್ಚು ಆದಾಯ ನೀಡಬಲ್ಲ ತಳಿ ಮತ್ತೊಂದಿಲ್ಲ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳಲ್ಲೂ ಹಲವು ತಳಿಯ ಅಡಿಕೆ ಸಸಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಮಂಗಳ, ಸುಮಂಗಳ, ಶ್ರೀವರ್ಧನ, ಶ್ರೀಮಂಗಳ್, ಮೋಹಿತ್ ನಗರ, ಸಮೃದ್ಧಿ, ಸ್ವರ್ಣಮಂಗಳ, ಕಾಹಿಕುಚಿ, ಮಧುರ ಮಂಗಳ, ನಲ್‌ಬರಿ , ಶತಮಂಗಳ, ಇವೆಲ್ಲವೂ ಬೇರೆ ದೇಶ ಇಲ್ಲವೇ ರಾಜ್ಯಗಳ ಮೂಲದ ತಳಿಗಳಾಗಿವೆ. ಹಿರೇಹಳ್ಳಿ ಹೆಸರಿನ ತಳಿಯ ಗಿಡಗಳು ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ಸೇರಿ ನಾನಾ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿವೆ.