ರಂಗಕರ್ಮಿ ಕೆ.ವಿ.ಅಕ್ಷರಗೆ ಗೌರವ ಡಾಕ್ಟರೇಟ್ I doctorate akshara

ಕುವೆಂಪು ವಿವಿ ಘಟಿಕೋತ್ಸವದಲ್ಲಿ ಕೆ.ವಿ.ಅಕ್ಷರ ಹಾಗೂ ಪ್ರೊ. ಎಚ್.ಎಂ.ರಂಗನಾಥ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಥಾವರಚಂದ್ ಗೆಹಲೋತ್, ಎಂ.ಸಿ.ಸುಧಾಕರ್, ಪ್ರೊ. ಶರತ್ ಅನಂತಮೂರ್ತಿ ಇತರರಿದ್ದರು.
ಕುವೆಂಪು ವಿವಿ ಘಟಿಕೋತ್ಸವದಲ್ಲಿ ಕೆ.ವಿ.ಅಕ್ಷರ ಹಾಗೂ ಪ್ರೊ. ಎಚ್.ಎಂ.ರಂಗನಾಥ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಥಾವರಚಂದ್ ಗೆಹಲೋತ್, ಎಂ.ಸಿ.ಸುಧಾಕರ್, ಪ್ರೊ. ಶರತ್ ಅನಂತಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುವೆಂಪು ವಿವಿ ಘಟಿಕೋತ್ಸವದಲ್ಲಿ ಪ್ರದಾನ
  • ಕಾರಣಾಂತರದಿಂದ ಕೋಣಂದೂರು ಲಿಂಗಪ್ಪ ಗೈರು
ಶಿವಮೊಗ್ಗ: ಕುವೆಂಪು (kuvempu) ವಿವಿ ಘಟಿಕೋತ್ಸವದಲ್ಲಿ ನಾಡಿನ ಮೂವರು ಗಣ್ಯ ಸಾಧಕರಿಗೆ ಗೌರವ ಡಾಕ್ಟರೇಟ್ (doctorate) ಪ್ರದಾನ ಮಾಡಲಾಯಿತು. ಸಾಮಾಜಿಕ ಹೋರಾಟಗಾರ ಕೋಣಂದೂರು ಲಿಂಗಪ್ಪ, ರಂಗಕರ್ಮಿ ಕೆ.ವಿ.ಅಕ್ಷರ (akshara) ಮತ್ತು ಶಿಕ್ಷಣ ತಜ್ಞ ಪ್ರೊ.ಎಚ್.ಎ.ರಂಗನಾಥ್ ಡಾಕ್ಟರೇಟ್ ಗೌರವಕ್ಕೆ ಪಾತ್ರರಾದರು.
ವಯೋಸಹಜ ಸಮಸ್ಯೆಯಿಂದ ಬಳಲುತ್ತಿರುವ ಕೋಣಂದೂರು ಲಿಂಗಪ್ಪ ಘಟಿಕೋತ್ಸವಕ್ಕೆ ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಡಾಕ್ಟರೇಟ್ ಘೋಷಿಸಲಾಯಿತು. ಕೆ.ವಿ.ಅಕ್ಷರ ಹಾಗೂ ಪ್ರೊ. ಎಚ್.ಎ.ರಂಗನಾಥ್ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು. ಮುಂದಿನ ದಿನಗಳಲ್ಲಿ ಕುಲಪತಿ ಸೇರಿದಂತೆ ವಿವಿ ಪ್ರಮುಖರು ಲಿಂಗಪ್ಪ ಅವರ ನಿವಾಸಕ್ಕೆ ತೆರಳಿ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿವೆ.
ವೃತ್ತಿ ಕ್ಷೇತ್ರದ ಯಶಸ್ಸಿಗೆ ಶಿಕ್ಷಣ ವೇದಿಕೆ
ಜೀವನದಲ್ಲಿ ಯಶಸ್ಸಿಗಾಗಿ ನಿರಂತರ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ದೃಷ್ಟಿಕೋನ ಅಗತ್ಯ. ಸೋಲುಗಳು ಜೀವನದ ಭಾಗ. ಆದರೆ ಅವುಗಳಿಂದ ಕಲಿತು ಮುಂದೆ ಸಾಗುವುದೇ ನಿಜವಾದ ಯಶಸ್ಸು. ಪದವಿ ಪಡೆದವರ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ರಾಜ್ಯಪಾಲ, ಕುವೆಂಪು ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ್ ಗೆಹಲೋತ್ ಹೇಳಿದರು.
ಕುವೆಂಪು ವಿವಿ 35ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂದು ಪಡೆಯುತ್ತಿರುವ ಪದವಿಯು ಕೇವಲ ಜ್ಞಾನದ ಸಂಕೇತವಲ್ಲ, ಸಮಾಜಕ್ಕೆ ಉತ್ತಮ ದಿಕ್ಕು ನೀಡಬಲ್ಲ ಸಾಮರ್ಥ್ಯದ ಪ್ರತೀಕ. ಇಂದು ನೀವು ಜ್ಞಾನ ದೇಗುಲದಿಂದ ಹೊರಬಂದು ಕರ್ಮಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದೀರಿ. ಇಲ್ಲಿ ಪಡೆದ ಶಿಕ್ಷಣವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಗೊಳಿಸುತ್ತವೆ. ಅಲ್ಲದೆ ಜೀವನವನ್ನು ಸಾರ್ಥಕಗೊಳಿಸಲು ಸಹಕಾರಿಯಾಗಲಿದೆ ಎಂಬ ನಂಬಿಕೆಯಿದೆ ಎಂದರು.
ಜಗತ್ತು ಕ್ಷಿಪ್ರ ಬದಲಾವಣೆ ಹಂತದಲ್ಲಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಜೀವನದ ಪ್ರತಿಯೊಂದು ಕ್ಷೇತ್ರವನ್ನು ಆವರಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಡಿಜಿಟಲ್ ಕ್ರಾಂತಿಯು ಹೊಸ ಅವಕಾಶಗಳ ಜತೆಗೆ ಹೊಸ ಸವಾಲುಗಳನ್ನೂ ತಂದೊಡ್ಡಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ನಿರಂತರವಾಗಿ ಕಲಿಯುವ ಪ್ರವೃತ್ತಿ ಮತ್ತು ಸಾಮಾಜಿಕ ಜವಾಬ್ದಾರಿ ಬಹಳ ಮುಖ್ಯ. ಆದ್ದರಿಂದ ಜ್ಞಾನ ಮತ್ತು ಕೌಶಲಗಳನ್ನು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಇಂದು ವಿಕಸಿತ ಭಾರತ-2047ರ ಸಂಕಲ್ಪದೊಂದಿಗೆ ಹೊಸ ಯುಗದತ್ತ ಸಾಗುತ್ತಿದೆ. ಈ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಯುವಕರ ಪಾತ್ರ ಬಹುದೊಡ್ಡದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net