ಸಾವಿರಾರು ಹುದ್ದೆಗಳ ಭರ್ತಿ ಐತಿಹಾಸಿಕ ನಿರ್ಧಾರ | Education minister

ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಆಶೀರ್ವಾದ ಪಡೆದರು. ಕಲಸೆ ಚಂದ್ರಪ್ಪ, ಗಿರೀಶ್ ಕೋವಿ ಇತರರಿದ್ದರು.
ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಆಶೀರ್ವಾದ ಪಡೆದರು. ಕಲಸೆ ಚಂದ್ರಪ್ಪ, ಗಿರೀಶ್ ಕೋವಿ ಇತರರಿದ್ದರು.
Published on
ಸಾಗರ: ರಾಜ್ಯದಲ್ಲಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರ. ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಸಾಗರದಲ್ಲಿ ಸೋಮವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ನಿಗದಿಪಡಿಸದೆ ನೇಮಕಾತಿ ಮಾಡಿದರೆ ಕೆಲವು ವರ್ಗಗಳಿಗೆ ಅನ್ಯಾಯವಾಗುತ್ತದೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಇಲಾಖೆಯಲ್ಲೂ ಹೆಚ್ಚು ಆಕಾಂಕ್ಷಿಗಳಿದ್ದಾರೆ ಎಂದರು.
ವಿಪಕ್ಷ ನಾಯಕ ಆರ್.ಅಶೋಕ್ ಪುಕ್ಕಟೆ ಭಾಷಣ ಮಾಡುತ್ತಾರೆ. 2 ಲಕ್ಷ ಉದ್ಯೋಗ ಭರ್ತಿ ಮಾಡಬೇಕು ಎಂದು ಹೇಳಿಕೆ ನೀಡುತ್ತಾರೆ. ನಮ್ಮ ಮೂರು ವರ್ಷದ ಅವಧಿಯಲ್ಲಿ ಅಷ್ಟು ಪ್ರಮಾಣದ ನೌಕರರು ನಿವೃತ್ತಿಯೇ ಆಗಿಲ್ಲ. ಹಿಂದಿನ ಸರ್ಕಾರದಲ್ಲಿ ಮೂರು ಜನ ಉಪಮುಖ್ಯಮಂತ್ರಿಗಳಿದ್ದರೂ ಏನು ಮಾಡಲಿಲ್ಲ ಎಂದು ಟೀಕಿಸಿದರು.
ಬಜೆಟ್‌ನಲ್ಲಿ ಜಿಲ್ಲೆಗೆ ಬೇರೆಬೇರೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ರಾಜ್ಯಮಟ್ಟದ ಕಾರ್ಯಕ್ರಮ ಉದ್ಘಾಟನೆಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಆಗ ಜಿಲ್ಲೆಗೆ ಬೇಕಾದ ಒಂದಷ್ಟು ಯೋಜನೆಗಳನ್ನು ಅವರೇ ಘೋಷಿಸಲಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಶೀಘ್ರವೇ ಸುಮಾರು 5 ಸಾವಿರ ಜನರಿಗೆ ಹಕ್ಕುಪತ್ರ ಕೊಡುವ ಕಾರ್ಯಕ್ರಮವನ್ನು ಕಾಗೋಡು ನೇತೃತ್ವದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಂತ್ರಸ್ತರಿಗೆ ಭೂಹಕ್ಕು ನಿಶ್ಚಿತ: ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರೇ ಈ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದರು. ಅರ್ಜಿಗಳನ್ನು ವಜಾ ಮಾಡಿ ಈಗ ಹೋರಾಟ ಎನ್ನುತ್ತಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರ ಪರ ನಾವು ಹೋರಾಟ ಮಾಡುತ್ತೇವೆ. ಅಂತಿಮವಾಗಿ ಕಾನೂನು ಏನು ಹೇಳುತ್ತೋ ಅದನ್ನೇ ಮಾಡಬೇಕಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು. ಅಧಿಕಾರಕ್ಕೆ ಬರುವ ಮೊದಲು ನಾವು ಕಾಗೋಡು ತಿಮ್ಮಪ್ಪ ಅವರ ಎದುರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಅದನ್ನು ಖಂಡಿತಾ ಈಡೇರಿಸುತ್ತೇವೆ. ಈಗಾಗಲೇ ನ್ಯಾಯಾಲಯ ಉತ್ತಮವಾಗಿ ಸ್ಪಂದಿಸುತ್ತಿದೆ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net