ಖಾತೆ ಬದಲಾವಣೆಗೆ ಅಧಿಕ ಶುಲ್ಕ ವಸೂಲಿ I khata change

ಶಿವಮೊಗ್ಗ ನಗರ ಪಾಲಿಕೆ.
ಶಿವಮೊಗ್ಗ ನಗರ ಪಾಲಿಕೆ.
Published on

ಪ್ರಮುಖ ಮುಖ್ಯಾಂಶಗಳು

  • ನಗರಪಾಲಿಕೆಯಿಂದ ಜನರ ಸುಲಿಗೆ
  • ಸಮಸ್ಯೆ ಆಲಿಸದ ಜನಪ್ರತಿನಿಧಿಗಳು
  • ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ವಿರೋಧ
  • ಸರ್ಕಾರದ ಸುತ್ತೋಲೆಗೂ ಇಲ್ಲ ಬೆಲೆ
  • ಶಿವಮೊಗ್ಗದಲ್ಲಿ ಮಾತ್ರವೇ ಕಡೆಗಣನೆ
ಶಿವಮೊಗ್ಗ: ರಾಜ್ಯದಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಒಂದು ಕಾನೂನಾದರೆ ಶಿವಮೊಗ್ಗ ನಗರ ಪಾಲಿಕೆ (paike) ಯದು ಪ್ರತ್ಯೇಕ ಕಾನೂನು. ನಗರ ಪಾಲಿಕೆಯಲ್ಲಿ ಖಾತೆ (khata) ಬದಲಾವಣೆ (change) ಶುಲ್ಕದ ಹೆಸರಿನಲ್ಲಿ ನಿಗದಿಗಿಂತ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ.
ಯಾವುದೇ ಒಂದು ಆಸ್ತಿಯ ಮೌಲ್ಯ 1.10 ಕೋಟಿ ರೂ. ಇದ್ದರೆ, ಸರ್ಕಾರದ ಈಗಿನ ಸುತ್ತೋಲೆ ಪ್ರಕಾರ ಖಾತೆ ಬದಲಾವಣೆಗೆ ಮುದ್ರಾಂಕ ಶುಲ್ಕದ ಮೇಲೆ 12,320 ರೂ. ಶುಲ್ಕ ಪಡೆಯಬಹುದು. ಆದರೆ ಶಿವಮೊಗ್ಗ ನಗರ ಪಾಲಿಕೆಯಿಂದ 55 ಸಾವಿರ ರೂ. ಶುಲ್ಕ ಪಡೆಯಲಾಗುತ್ತಿದೆ.
ಕಳೆದ ಕೆಲವು ತಿಂಗಳಿನಿಂದ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಪಾಲಿಕೆಯ ಈ ನಡೆ ವಿರುದ್ಧ ದನಿ ಎತ್ತುತ್ತಿದೆ. ಆದರೆ ಇದಕ್ಕೆ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ನಡೆ ಪ್ರಶ್ನಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಾದ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮೌನವಹಿಸಿದ್ದಾರೆ.

ಸರ್ಕಾರದ ಸುತ್ತೋಲೆಗೆ ಕಿಮ್ಮತ್ತಿಲ್ಲ

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಸರ್ಕಾರದ ಸುತ್ತೋಲೆಗೂ ಗೌರವ ಇಲ್ಲದಂತಾಗಿದೆ. ಪೌರಾಡಳಿತ ನಿರ್ದೇಶನಾಲಯವು 2006ರ ಜ.30ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಆಸ್ತಿಯ ಮುದ್ರಾಂಕದ ಮೇಲೆ ಶೇ.2ರಷ್ಟು ಖಾತೆ ಬದಲಾವಣೆ ಶುಲ್ಕ ಪಡೆಯುವಂತೆ ಸ್ಪಷ್ಟಪಡಿಸಿತ್ತು. ಇದಾದ ಬಳಿಕ 2022ರ ಫೆ.19ರಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದ ಪೌರಾಡಳಿತ ನಿರ್ದೇಶನಾಲಯ ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ಖಾತೆ ಬದಲಾವಣೆ ಶುಲ್ಕ ಪಡೆಯುವಂತೆ ತಿಳಿಸಿತ್ತು. ರಾಜ್ಯದ ಎಲ್ಲ ಪಾಲಿಕೆಗಳು ಇದನ್ನು ಪಾಲಿಸುತ್ತಿವೆ. ಆದರೆ ಶಿವಮೊಗ್ಗದಲ್ಲಿ ಮಾತ್ರ ಸುತ್ತೋಲೆ ಪಾಲನೆಯಾಗುತ್ತಿಲ್ಲ.
ಸಂಗ್ರಹ ಹಣ 30 ಕೋಟಿ ರೂ.!
ಒಂದು ಅಂದಾಜಿನ ಪ್ರಕಾರ ಕಳೆದೊಂದು ದಶಕಕ್ಕೂ ಹೆಚ್ಚು ಕಾಲದಿಂದ ಅಧಿಕವಾಗಿ ಪಡೆದಿರುವ ಖಾತೆ ಬದಲಾವಣೆ ಶುಲ್ಕದ ಒಟ್ಟು ಮೊತ್ತ 30 ಕೋಟಿ ರೂ. ಪಾಲಿಕೆಯಿಂದ ಹೀಗೆ ಹೆಚ್ಚುವರಿಯಾಗಿ ಆಸ್ತಿದಾರರಿಂದ ಪಡೆದ ಹಣವನ್ನು ಮರಳಿಸಬೇಕೆಂದು ಇದೀಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಒತ್ತಾಯಿಸಿದೆ. ಈಗಾಗಲೇ ಅಧಿಕ ಶುಲ್ಕ ಕಟ್ಟಿದವರು ಚಲನ್ ಸಂಖ್ಯೆಯೊಂದಿಗೆ ಸಂಪೂರ್ಣ ವಿವರ ನೀಡಿದರೆ ಒಕ್ಕೂಟದಿಂದ ಕಾನೂನು ಹೋರಾಟ ನಡೆಸುವ ಚಿಂತನೆಯೂ ನಡೆದಿದೆ.

ಇಂದು ನಿನ್ನೆಯದಲ್ಲ

ಈಗ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲ. ಆದರೆ ಅವರು ಇದ್ದಾಗಲೂ ಶುಲ್ಕದ ಹೆಸರಿನಲ್ಲಿ ಸಾರ್ವಜನಿಕರ ಲೂಟಿ ನಡೆದಿದೆ. 2014ರಿಂದಲೂ ಇದೇ ವ್ಯವಸ್ಥೆ ರೂಢಿಯಲ್ಲಿದೆ. ಅಂದಿನಿಂದ ಅಧಿಕಾರದಲ್ಲಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಏನು ಮಾಡುತ್ತಿದ್ದರು ಎಂಬುದು ಹಲವರ ಪ್ರಶ್ನೆ. ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳಿಗೆ ಈ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೂ ವ್ಯವಸ್ಥೆ ಬದಲಾವಣೆಯಾಗಿಲ್ಲ ಎಂಬುದು ವಿಪರ್ಯಾಸ.

ಒಬ್ಬೊಬ್ಬರಿಗೆ ಒಂದೊಂದು ರೀತಿ

ಖಾತೆ ಬದಲಾವಣೆ ಶುಲ್ಕ ಎಲ್ಲರ ಬಳಿಯೂ ಬೇಕಾಬಿಟ್ಟಿ ಸಂಗ್ರಹ ಮಾಡಿಲ್ಲ. ಆರ್ಥಿಕ ಹಾಗೂ ರಾಜಕೀಯ ಬಲಾಢ್ಯರು, ಪ್ರಭಾವಿಗಳು, ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದವರ ಬಳಿ ಸರ್ಕಾರದ ಸುತ್ತೋಲೆ ಪ್ರಕಾರವೇ ಖಾತೆ ಬದಲಾವಣೆ ಶುಲ್ಕವನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ದುಬಾರಿ ಶುಲ್ಕ ಪಾವತಿಸುವ ಬದಲಿಗೆ ಕೆಲವರು ಸಿಬ್ಬಂದಿಗೆ ಲಂಚದ ರೂಪದಲ್ಲಿ ಹಣ ನೀಡಿ ತಮ್ಮ ಕೆಲಸ ಮಾಡಿಸಿಕೊಂಡಿರುವ ಅನುಮಾನವೂ ಈಗ ವ್ಯಕ್ತವಾಗುತ್ತಿದೆ.
"

ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಶಿವಮೊಗ್ಗ ನಗರ ಪಾಲಿಕೆ ಖಾತೆ ಬದಲಾವಣೆ ಶುಲ್ಕ ಪಡೆಯುತ್ತಿರುವುದು ಹಗಲು ದರೋಡೆಯಾಗಿದೆ. ಆಯುಕ್ತರಿಗೆ ಹಲವು ಬಾರಿ ದೂರು ನೀಡಿದರೂ ವ್ಯವಸ್ಥೆ ಬದಲಾಗಿಲ್ಲ. ನಿಯಮಬಾಹಿರವಾಗಿ ಮುದ್ರಾಂಕ ಶುಲ್ಕ ಪಡೆಯಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಪಾತ್ರವೂ ಇದೆ.

— ಕೆ.ವಿ. ವಸಂತ್‌ಕುಮಾರ್ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net