ಸೊರಬ: ದಿನನಿತ್ಯದ ಬದುಕಿನಲ್ಲಿ ಮನುಷ್ಯ ಒತ್ತಡದಿಂದ ಹೊರಬರಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ತುಂಬಾ ಸಹಕಾರಿ ಎಂದು ಸುರಭಿ ಯೋಗ ಕೇಂದ್ರದ ಯೋಗ ಶಿಕ್ಷಕಿ ರೇಖಾ ಶ್ರೀನಿವಾಸ ನಾವುಡ ಹೇಳಿದರು.
ಕಾನುಕೇರಿ ಮಠದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಯೋಗಿಕವಾಗಿ ಯೋಗ, ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆ ಉಂಟಾಗುತ್ತವೆ ಎಂದು ತಿಳಿಸಿದರು.
ಸಮಾಜ ಸೇವಕ ನಾಗರಾಜ್ ಗುತ್ತಿ ಮಾತನಾಡಿ, ಯೋಗದಿಂದ ರೋಗ ದೂರ ಮಾಡಲು ಸಾಧ್ಯ. ನಿತ್ಯ ಜೀವನದಲ್ಲಿ ಹೊಸತನ, ಲವಲವಿಕೆಯಿಂದ ಇರಲು ಯೋಗಾಭ್ಯಾಸ ಮುಖ್ಯ ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್ ಮಾತನಾಡಿ, ಯೋಗ ಅಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆ ಸಾಧ್ಯ. ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.