ಜಲಚರಗಳಿಗೂ ಬಿಸಿಗಾಳಿ ಸಂಕಷ್ಟ I heat wave

ಬಿಸಿಲಿನ ಹೊಡೆತಕ್ಕೆ ಕಂಗೆಟ್ಟಿರುವ ಮೀನುಗಳ ಸಂತತಿ
ಬಿಸಿಲಿನ ಹೊಡೆತಕ್ಕೆ ಕಂಗೆಟ್ಟಿರುವ ಮೀನುಗಳ ಸಂತತಿ
Published on

ಪ್ರಮುಖ ಮುಖ್ಯಾಂಶಗಳು

  • ನೀರಿನಲ್ಲಿ ಆಮ್ಲಜನಕ ಪ್ರಮಾಣ ಇಳಿಕೆ
  • ಜಲ ಕಡಿಮೆಯಾದಷ್ಟೂ ಹೆಚ್ಚುವ ಆತಂಕ
  • ಆಕ್ಸಿಜನ್ ಕೊರತೆಯಿಂದ ಮೀನುಗಳಿಗೆ ಕಂಟಕ
ಅರವಿಂದ ಅಕ್ಲಾಪುರ ಶಿವಮೊಗ್ಗ
ಈ ಬಾರಿ ಬೇಸಿಗೆ (summer) ಜಿಲ್ಲೆಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ (temprature) ಏರುತ್ತಲೇ ಇದೆ. ಬಿಸಿಲಿನ ಝಳದಿಂದ ಜನರು ಕಂಗಾಲಾಗಿದ್ದಾರೆ. ಬಿರು ಬಿಸಿಲು, ಬಿಸಿ ಗಾಳಿ (heat wave) ಜಲಚರಗಳಿಗೂ ಸಂಕಷ್ಟ ಉಂಟುಮಾಡಿದೆ. ತೀವ್ರವಾದ ಬಿಸಿಗೆ ನೀರಿನಲ್ಲಿರುವ ಮತ್ಸ ೃ ಸಂಕುಲದ ಪ್ರಾಣಕ್ಕೂ ಕಂಟಕವಾಗುವ ಅಪಾಯವಿದೆ.
ಕಳೆದ ವರ್ಷ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ಎರಡು ಕೆರೆಗಳಲ್ಲಿ ಸುಮಾರು ಐದು ಕ್ವಿಂಟಾಲ್‌ಗಳಷ್ಟು ಮೀನುಗಳು ಮೃತಪಟ್ಟಿದ್ದವು. ಈ ವರ್ಷವೂ ಮತ್ತೆ ಮೀನು ಸಾಕಣೆದಾರರಿಗೆ, ಕೆರೆಗಳನ್ನು ಗುತ್ತಿಗೆ ಪಡೆದವರಿಗೆ ನಷ್ಟದ ಆತಂಕ ಶುರುವಾಗಿದೆ. ತಾಪಮಾನ ಇದೇ ರೀತಿ ಏರಿಕೆಯಾದರೆ ಇನ್ನೂ ಒಂದು ತಿಂಗಳು ಮೀನುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.
ಬೇಸಿಗೆಯಲ್ಲಿ ಕೆರೆಗಳ ನೀರಿನ ಸಂಗ್ರಹಮಟ್ಟ ಕುಸಿತವಾಗುತ್ತಿದೆ. ಅದೇ ಸಂದರ್ಭದಲ್ಲಿ ನೀರಿನ ಉಷ್ಣಾಂಶ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಮತ್ಸ ೃ ಸಂತತಿಗೆ ಶಾಪವಾಗಿ ಪರಿಣಮಿಸಿದೆ. ಇನ್ನೊಂದೆಡೆ ಮೀನು ಸಾಕಣಿಕೆದಾರರ ಎಡವಟ್ಟು ಕೂಡ ಮೀನುಗಳ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಬೇಸಿಗೆ ಆರಂಭದಲ್ಲಿಯೇ ಕೆರೆಗಳಲ್ಲಿರುವ ಬೆಳೆದ ಮೀನುಗಳನ್ನು ಹಿಡಿದರೆ ಸಮಸ್ಯೆಯಾಗುವುದಿಲ್ಲ. ಆದರೆ ಮೀನುಗಳು ಮತ್ತಷ್ಟು ಬಲಿತರೆ ಹೆಚ್ಚು ತೂಕ ಸಿಗುತ್ತದೆ ಎಂಬ ಕಾರಣಕ್ಕೆ ಮೀನುಗಳನ್ನು ಹಿಡಿಯುವುದಿಲ್ಲ. ಇದು ಮೀನುಗಳ ಸಾಮೂಹಿಕ ಸಾವಿಗೆ ಕಾರಣವಾಗುತ್ತದೆ.
ಕೆರೆಯಲ್ಲಿ ಮೀನುಗಳಿಗೆ ಬೇಸಿಗೆಯಲ್ಲಿ ಹೆಚ್ಚು ಸ್ಥಳಾವಕಾಶ ಬೇಕಾಗುತ್ತದೆ. ಬಲಿತ ಮೀನುಗಳಿರುವುದರಿಂದ ಸ್ಥಳಾವಕಾಶ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಕೆರೆಯ ನೀರಿನ ಸಂಗ್ರಹ ಕಡಿಮೆಯಾಗುವುದರಿಂದ ಮೀನುಗಳು ನಿರಾಳವಾಗಿ ಜೀವಿಸುವುದು ಕಷ್ಟವಾಗುತ್ತದೆ.

ನಷ್ಟಕ್ಕೆ ಹೊಣೆ ಯಾರು?

ಕೆರೆಗಳನ್ನು ಗುತ್ತಿಗೆ ಪಡೆದು ಮೀನು ಸಾಕುವವರು ಲಾಭ, ನಷ್ಟ ಎರಡಕ್ಕೂಆವರೇ ಹೊಣೆ. ಬೇಸಿಗೆಯಲ್ಲಿ ಮೀನುಗಳು ಸತ್ತರೆ ಸಾಕಣೆದಾರರಿಗೆ ಮೀನುಗಾರಿಕೆ ಇಲಾಖೆಯಿಂದ ಪರಿಹಾರವನ್ನೇನೂ ನೀಡುವುದಿಲ್ಲ. ಕೆರೆಯನ್ನು ಗುತ್ತಿಗೆ ನೀಡುವ ಸಂದರ್ಭದಲ್ಲೇ ಈ ಕರಾರು ಮಾಡಿಕೊಳ್ಳಲಾಗುತ್ತದೆ. ಲಾಭ ಬಂದಾಗ ಸಂಭ್ರಮಿಸುವ ಸಾಕಣಿಕೆದಾರ ನಷ್ಟವಾದಾಗಲೂ ಸಹಿಸಿಕೊಳ್ಳಬೇಕು. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸುವಂತೆ ಮೀನುಗಳಿಗೂ ವಿಮೆ ಮಾಡಿಸುವ ಅವಕಾಶವಿದೆ. ಆದರೆ ಬಹುತೇಕ ಮೀನು ಸಾಕಣಿಕೆದಾರರು ವಿಮೆ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಒಂದು ವೇಳೆ ವಿಮೆ ಮಾಡಿಸಿದರೆ ನಿಶ್ಚಿತವಾಗಿ ಪರಿಹಾರ ಸಿಗುತ್ತದೆ. ಸಾಕಣಿಕೆದಾರರು ನಷ್ಟವಾದ ಮೇಲೆ ಕೈ ಹಿಸುಕಿಕೊಳ್ಳುತ್ತಾರೆಯೇ ಹೊರತು ಮುಂಜಾಗ್ರತೆಯಾಗಿ ವಿಮೆ ಮಾಡಿಸುವುದಿಲ್ಲ. ಇದು ನಷ್ಟದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕೆರೆಗಳಿಗೆ ಸೇರುವ ಕೀಟನಾಶಕ

ಬೇಸಿಗೆಯಲ್ಲಿ ಅಡಕೆ ತೋಟಗಳಿಗೆ ಹರಿಸುವ ನೀರು ಹೆಚ್ಚಾದರೆ ಅದು ಸಮೀಪದ ಕೆರೆಗಳನ್ನು ಸೇರಿಕೊಳ್ಳುತ್ತದೆ. ತೋಟಕ್ಕೆ ಬಳಕೆಯಾಗುವ ರಾಸಾಯನಿಕಗಳು ನೀರಿನ ಮೂಲಕ ಕೆರೆಗಳಿಗೆ ಹೋಗುತ್ತದೆ. ಒಂದೆಡೆ ಆಮ್ಲಜನಕದ ಕೊರತೆ, ಇನ್ನೊಂದೆಡೆ ರಾಸಾಯನಿಕಗಳ ಸೇರ್ಪಡೆಯಿಂದ ಮೀನುಗಳಿಗೆ ಉಸಿರಾಟ ಸಮಸ್ಯೆಯಾಗುತ್ತದೆ. ಆಗಲೂ ಮೀನುಗಳ ಸಾಮೂಹಿಕ ಸಾವು ಸಂಭವಿಸುತ್ತದೆ. ನಿಜವಾಗಿಯೂ ಈ ಬಾರಿಗೆ ಬೇಸಿಗೆ ಮತ್ಸ ೃ ಸಂಕುಲಕ್ಕೆ ಸತ್ವ ಪರೀಕ್ಷೆಯ ಕಾಲ.

ಮಾರಕವಾದ ಮಲಿನ ನೀರು

ಜಿಲ್ಲೆಯ ಕೆರೆಕಟ್ಟೆಗಳು ಮಾತ್ರವಲ್ಲದೆ ತುಂಗಾ ನದಿಯೂ ಮೀನುಗಳಿಗೆ ಕ್ಷೇಮವಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ತುಂಗಾ ನದಿಗೆ ಸೇರುವ ತ್ಯಾಜ್ಯವೂ ಹೆಚ್ಚಿದೆ. ಅದರಲ್ಲೂ ಶಿವಮೊಗ್ಗ ನಗರದಲ್ಲಿ ಮಲಿನ ಮಿತಿ ಮೀರಿದೆ. ಇದರಿಂದ ತುಂಗೆಯ ಮಡಿಲಿನಲ್ಲಿ ಆಶ್ರಯ ಪಡೆದಿದ್ದ ಮೀನುಗಳು ಕ್ರಮೇಣ ನಾಶವಾಗುತ್ತಿವೆ. ಶಿವಮೊಗ್ಗ ಸುತ್ತಮುತ್ತ ಸುಮಾರು 20 ವರ್ಷಗಳ ಹಿಂದೆ ದಿನಕ್ಕೆ 15-18 ಕೆಜಿ ಮೀನು ಹಿಡಿಯುತ್ತಿದ್ದ ಮೀನುಗಾರರಿಗೆ ಈಗ ಒಂದೆರಡು ಕೆಜಿ ಸಿಕ್ಕರೆ ಹೆಚ್ಚು ಎನ್ನುವಂತಾಗಿದೆ. ಶಿವಮೊಗ್ಗ ನಗರದ ತ್ಯಾಜ್ಯದ ನೀರು ತುಂಗೆ ಒಡಲು ಸೇರುವುದರಿಂದ ಅದು ಸುಮಾರು 20 ಕಿಮೀ ವ್ಯಾಪ್ತಿಯಲ್ಲಿ ಗಂಭೀರ ಪರಿಣಾಮ ಬೀರುತ್ತಿದೆ. ಸುಮಾರು 15 ತಳಿಗಳು ಶಿವಮೊಗ್ಗ ಸುತ್ತಮುತ್ತಲಿನ ತುಂಗಾ ನದಿಯಲ್ಲಿತ್ತು. ಆದರೆ ಈಗ ಉಳಿದಿರುವುದು ಬಾಂಬಾ ಕಾಟ್ಲಾ ತಳಿ ಮಾತ್ರ. ಮಲಿನ ನೀರಲ್ಲೂ ಆಮ್ಲಜನಕ ಸೇವಿಸುವ ಗುಣವೇ ಈ ತಳಿಯನ್ನು ಉಳಿಸಿದೆ. ಆದರೆ ಇದರ ಪ್ರಮಾಣವೂ ಕಡಿಮೆಯಾಗಿದೆ ಎಂಬ ಆತಂಕ ಮೀನುಗಾರರದ್ದು. ಹದ್ದಿನಮೀನು, ಗಿರ್ಲ್‌, ದೊಡ್ಲೆ ಮೀನು, ಹಾವು ಮೀನು, ಗೆಂಡೆ ಮೀನು...ಹೀಗೆ 15ಕ್ಕೂ ಹೆಚ್ಚು ಮೀನಿನ ತಳಿಗಳು 20 ವರ್ಷಗಳ ಹಿಂದೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಲ್ಲಿದ್ದವು. ಕ್ರಮೇಣ ನದಿಗೆ ಸೇರುವ ಮಲಿನ ನೀರು ಹೆಚ್ಚಾದಂತೆ ಇವುಗಳ ಉಸಿರಾಟಕ್ಕೂ ಸಮಸ್ಯೆಯಾಗಿ ಸಂತತಿ ನಾಶವಾಗಿದೆ.
"

ಬೇಸಿಗೆಯಲ್ಲಿ ಕೆರೆಗಳ ನೀರು ಸಂಗ್ರಹ ಕಡಿಮೆ ಆಗುವುದರಿಂದ ಎಚ್ಚರ ಅಗತ್ಯ. ಈ ಸಮಯದಲ್ಲಿ ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ. ಅದೇ ಸಮಯದಲ್ಲಿ ನೀರು ಬಿಸಿಯಾಗುತ್ತದೆ. ಇದರಿಂದ ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಕೆರೆಗಳಲ್ಲಿ ಮೀನುಗಳ ಸಂಖ್ಯೆ ಹೆಚ್ಚಿದ್ದಾಗಲೂ ಅವುಗಳಿಗೆ ಆಮ್ಲಜನಕದ ಕೊರತೆಯಾಗುತ್ತದೆ. ಇದುವರೆಗೆ ಜಿಲ್ಲೆಯಲ್ಲಿ ಮೀನುಗಳ ಮರಣ ಪ್ರಕರಣ ಸಂಭವಿಸಿಲ್ಲ.

— ಶಿವಕುಮಾರ್ ಜಂಟಿ ನಿರ್ದೇಶಕ, ಮೀನುಗಾರಿಕೆ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net