ಮೇನಲ್ಲಿ ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ | visit to bridge
ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಸೇತುವೆ ಕಾಮಗಾರಿ ಕುರಿತು ಅಧಿಕಾರಿಗಳಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ಪಡೆದರು. ಶಾಸಕ ಗೋಪಾಲಕೃಷ್ಣ ಬೇಳೂರು ಇತರರಿದ್ದರು.
ಸಾಗರ: ಶರಾವತಿ ಹಿನ್ನೀರಿನ ಹಸಿರುಮಕ್ಕಿ ಸೇತುವೆಯ ಎರಡು ಪಿಲ್ಲರ್‌ಗಳ ಬದಲಾವಣೆ ಕಾರ್ಯ ಇರುವುದರಿಂದ ವಿಳಂಬವಾಗಿದೆ. ಮೇ ತಿಂಗಳಲ್ಲಿ ಲೋಕಾರ್ಪಣೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಸಿಎಂ ಆಗಮಿಸಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಾಗರ ತಾಲೂಕಿನ ಹಸಿರುಮಕ್ಕಿಯಲ್ಲಿ ಸೋಮವಾರ ಶರಾವತಿ ಹಿನ್ನೀರಿಗೆ ನಿರ್ಮಿಸುತ್ತಿರುವ ಹಸಿರುಮಕ್ಕಿ ಸೇತುವೆ ಕಾಮಗಾರಿಯನ್ನು ಲಾಂಚ್ ಮೂಲಕ ತೆರಳಿ ಪರಿಶೀಲಿಸಿ ಮಾತನಾಡಿದರು.
ದಕ್ಷಿಣ ಕನ್ನಡವನ್ನು ಸಂಪರ್ಕಿಸಲು ಈ ಮಾರ್ಗ ತೀರ ಸಮೀಪದ್ದಾಗಿದೆ. ಕೊಲ್ಲೂರು, ಕುಂದಾಪುರಕ್ಕೆ ತೆರಳುವವರಿಗೆ ಈ ಮಾರ್ಗ ಅತ್ಯಂತ ಹತ್ತಿರವಾಗಲಿದೆ. ಅದರಲ್ಲಿಯೂ ಸಾಗರ ಹಾಗೂ ಹೊಸನಗರ ತಾಲೂಕಿನ ಭಾಗಗಳ ಸಂಪರ್ಕಕ್ಕೆ ಸೇತುವೆ ಅತ್ಯಂತ ಸಹಕಾರಿಯಾಗಲಿದೆ ಎಂದರು.
2018ರಲ್ಲಿ ನಮ್ಮದೇ ಸರ್ಕಾರ ಇದ್ದಾಗ ಕಾಗೋಡು ತಿಮ್ಮಪ್ಪ ಅವರು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಬೇರೆಬೇರೆ ಕಾರಣದಿಂದ ಸೇತುವೆ ನಿರ್ಮಾಣ ವಿಳಂಬವಾಗಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸೇತುವೆ ನಿರ್ಮಾಣ ಕುರಿತು ಹೆಚ್ಚಿನ ಆಸಕ್ತಿ ವಹಿಸಿ ನನ್ನ ಮೇಲೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚನೆ ನೀಡಿ 56 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದರು.
ಸಾಗರದ ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ 2 ಕೋಟಿ ರೂ. ಮಂಜೂರಾಗಿದೆ. ಭೂಸ್ವಾಧೀನಕ್ಕಾಗಿ ಶೀಘ್ರವೇ 11 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಪೊಲೀಸ್ ಸ್ಟೇಷನ್ ಹೊಸ ಕಟ್ಟಡ ನಿರ್ಮಾಣಕ್ಕೂ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಅಭಿಯಂತ ನಾಯಕ್, ಸಾಗರ ಎಸಿ ವೀರೇಶ್‌ಕುಮಾರ್, ಕಾರ್ಯಪಾಲಕ ಅಭಿಯಂತರಾದ ಶ್ರೀಧರ್, ವಿಜಯ ರಾಘವನ್, ರಾಘವೇಂದ್ರ, ಪಿಡಬ್ಲುೃಡಿ ಸಹಾಯಕ ಕಾರ್ಯಪಾಲಕ ಅಭಿಯಂತ ಅನಿಲ್, ಟಿ.ಪಿ.ರಮೇಶ್, ಆಪ್ಸ್‌ಕೋಸ್ ಅಧ್ಯಕ್ಷ ಇಂದೂಧರ ಇತರರಿದ್ದರು
ಬೇಳೂರು ಮುಖ್ಯಮಂತ್ರಿ ಆಗಬಹುದು
ರಾಜ್ಯ ರಾಜಕೀಯದಲ್ಲಿ ಯಾವ ರೀತಿ ಬೆಳವಣಿಗೆ ಬೇಕಾದರೂ ಆಗಬಹುದು. ಶಾಸಕ ಗೋಪಾಲಕೃಷ್ಣ ಬೇಳೂರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂದು ಮುಖ್ಯಮಂತ್ರಿ ಬದಲಾವಣೆ ರಾಜಕೀಯ ವಿದ್ಯಮಾನಗಳ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅಹಿಂದ ನಾಯಕರು ಎಂದು ಕರೆಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಯಾವ ಸಮಯಕ್ಕೆ ಬದಲಾವಣೆ ಆಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಸಂಪುಟ ಪುನಾರಚನೆ ಸಂದರ್ಭದಲ್ಲಿ ಹಿರಿಯರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಚರ್ಚೆ ಇದೆ. ಭ್ರಷ್ಟಾಚಾರಮುಕ್ತ ಆಡಳಿತ ನೀಡಬೇಕು ಎನ್ನುವುದು ನಮ್ಮ ಉದ್ದೇಶ. ಇದರ ಬಗ್ಗೆ ಭಾಷಣ ಬಿಗಿಯುತ್ತಿದ್ದ ಬಿಜೆಪಿಯ ಶಾಸಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದರು..
ಸಚಿವ ಸ್ಥಾನ ಕೊಡಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಿದೆ. ಸಚಿವ ಸಂಪುಟ ಮರುರಚನೆ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನ ಬೇಡಪ್ಪ. ಅದಕ್ಕೆಲ್ಲ ದೊಡ್ಡವರಿದ್ದಾರೆ. ನಾವು ಅಷ್ಟು ದೊಡ್ಡವರಲ್ಲ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನನಗೆ ಸಚಿವ ಸ್ಥಾನವನ್ನು ಕೊಡಲಿ ಸಾಕು ಎಂದು ಬೇಳೂರು ಪ್ರತಿಕ್ರಿಯಿಸಿದರು.